'ಅಪೂರ್ವ ಸಗೋಧರ್ಗಲ್' ನಟ ಕಮಲ್ ಹಾಸನ್ ಕೆರಿಯರ್ನಲ್ಲಿ ವಿಭಿನ್ನವಾದ ಸಿನಿಮಾ. ಕಮಲ್ ಅಭಿನಯ ಕೌಶಲ್ಯಕ್ಕೆ ಮತ್ತೊಂದು ಹೊಳಪು ನೀಡಿದ ಅಪರೂಪದ ಚಿತ್ರ.
ಹೌದು, ಕಮಲ್ 'ಅಪೂರ್ವ ಸಗೋಧರ್ಗಲ್' ಚಿತ್ರದಲ್ಲಿ ಮೂರು ಶೇಡ್ನಲ್ಲಿ ಅಭಿನಯಿಸಿದ್ದರು. ಅವಳಿ ಜವಳಿ ಸಹೋದರರು ಹಾಗೂ ಇವರ ತಂದೆಯ ಪಾತ್ರಕ್ಕೆ ಇವರೊಬ್ಬರೇ ಬಣ್ಣ ಹಚ್ಚಿದ್ದರು. 80ರ ದಶಕದಲ್ಲಿ ಬ್ಲಾಕ್ಬಸ್ಟರ್ ಚಿತ್ರವಾಗಿ 'ಅಪೂರ್ವ ಸಗೋಧರ್ಗಲ್' ದಾಖಲೆ ಬರೆದಿತ್ತು. ಕಥೆಯ ಜತೆಗೆ ಈ ಚಿತ್ರದಲ್ಲಿ ಪ್ರಮುಖ ಹೈಲೈಟ್ ನಟ ಕಮಲ್ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಟ್ವಿನ್ಸ್ ಸಹೋದರರ ಪೈಕಿ ಅಪ್ಪು ಹೆಸರಿನ ಪಾತ್ರದಲ್ಲಿ ಅವರು ಕುಳ್ಳನ ಪಾತ್ರ ನಿಭಾಯಿಸಿದ್ದರು. ಬೆಳ್ಳಿ ಪರದೆಯ ಮೇಲೆ ಕುಬ್ಜನ ಪಾತ್ರ ಕಮಲ್ ಅಭಿಮಾನಿಗಳಿಗೆ ಮೋಡಿ ಮಾಡಿತ್ತು. ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡು ಸಿನಿಮಾ ನೋಡಿ, ಇವರ ಅಭಿನಯಕ್ಕೆ ಭೇಷ್ ಭೇಷ್ ಎಂದಿದ್ದರು.
ನಂತರದ ಸಿನಿಮಾಗಳಲ್ಲಿ ಕಮಲ್ ಮತ್ತೆ ಅಂತಹ ಪಾತ್ರದಲ್ಲಿ ಅಭಿನಯಿಸಲಿಲ್ಲ. ಬಹುಶಃ ಶಾರುಖ್ ಅವರನ್ನು ಹೊರತು ಪಡಿಸಿ ಬೇರಾವ ನಟರು ಈ ಪ್ರಯತ್ನಕ್ಕೆ ಕೈ ಹಾಕಿರಲಿಲ್ಲ. ಕಳೆದ ವರ್ಷ ತೆರೆಕಂಡಿದ್ದ ಜೀರೋ ಚಿತ್ರದಲ್ಲಿ ಈ ಚಾಲೆಂಜಿಂಗ್ ಪಾತ್ರ ನಿಭಾಯಿಸಿದ್ದರು ಬಾಲಿವುಡ್ ಬಾದ್ಷಾ. ಆದರೆ, ಕುಬ್ಜನ ಪಾತ್ರದಲ್ಲಿ ಶಾರುಖ್ ಹಾಗೂ ಕಮಲ್ ಅಭಿನಯಕ್ಕೆ ಅಜಗಜಾಂತರ ವ್ಯತ್ಯಾಸ ಕಂಡುಹಿಡಿದರು ಪ್ರೇಕ್ಷಕರು.
ಈಗೆಲ್ಲ ತಂತ್ರಜ್ಞಾನ ಬೆಳೆದಿದೆ. ಸಿಜೆ ವರ್ಕ್ ಮಾಡಿ ಯಾವದೇ ಪಾತ್ರವನ್ನು ಹೇಗೆ ಬೇಕಾದ್ರು ತೋರಿಸಬಹುದು. ಆದರೆ, ಅಂದು ಈ ಮಟ್ಟಿಗಿನ ತಾಂತ್ರಿಕತೆ ಸ್ಟ್ರಾಂಗ್ ಇರಲಿಲ್ಲ. ಆದ್ದರಿಂದ ಕುಬ್ಜನ ಪಾತ್ರ ಒಂದು ಸವಾಲು ಆಗಿತ್ತು. ಎಷ್ಟೇ ಕಷ್ಟವಾದ್ರೂ ಹಿಂದೆಸರಿಯದ ಕಮಲ್, ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದ್ದರು. ಹಗಲು ರಾತ್ರಿ ಎನ್ನದೇ ಪರಿಶ್ರಮ ಪಟ್ಟು ಪಾತ್ರ ನಿಭಾಯಿಸಿದ್ದರು. ಚಿತ್ರೀಕರಣದ ನಂತರ ತಮ್ಮ ಮಂಡಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.
ಅದೇನೆ ಇರಲಿ, ಈ 'ಅಪೂರ್ವ ಸಗೋಧರ್ಗಲ್' ತೆರೆ ಕಂಡು ಮೊನ್ನೆಗೆ (ಏಪ್ರಿಲ್ 14-1989) ಮೂವತ್ತು ವರ್ಷಗಳು ಕಳೆಯಿತು. ಈ ಪ್ರಯೋಗಾತ್ಮಕ ಚಿತ್ರಕ್ಕೆ ಜೀವ ತುಂಬಿದ ಹೆಮ್ಮೆ ಇಂದಿಗೂ ಕೂಡ ಕಮಲ್ ಕಣ್ಣುಗಳಲ್ಲಿ ಕಾಣಿಸಿಕೊಳ್ಳುತ್ತೆ.