ನಟ ವಿನೋದ್ ಪ್ರಭಾಕರ್ ಸಾಕಷ್ಟು ಗ್ಯಾಪ್ ಬಳಿಕ 8 ಪ್ಯಾಕ್ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಸಿನಿಮಾ ‘ರಗಡ್‘. ಮಹೇಶ್ ಗೌಡ ನಿರ್ದೇಶಿಸಿರುವ ಈ ಸಿನಿಮಾ ಇಂದು ಬಿಡುಗಡೆಯಾಗಿದೆ.
ಸಿನಿಮಾದಲ್ಲಿ ಆ್ಯಕ್ಷನ್ ಜೊತೆಗೆ ಮನತಟ್ಟುವ ಪ್ರೇಮಕಥೆ ಇದೆ. ಕಾಡಿನ ಜನರು ಸರ್ಕಾರದ ಆದೇಶದಿಂದ ಬೀದಿ ಪಾಲಾದಾಗ ಶಿವು (ವಿನೋದ್ ಪ್ರಭಾಕರ್) ಹಾಗೂ ಆತನ ಸ್ನೇಹಿತರು ಕೆಲಸ ಸಿಗದೆ ಕಂಗಾಲಾಗಿ ದರೋಡೆ ಮಾಡಲು ಮುಂದಾಗುತ್ತಾರೆ. ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಶಿವು ಹಾಗೂ ಗ್ಯಾಂಗ್ ಕಳ್ಳತನ ಮಾಡುತ್ತಲೇ ಇರುತ್ತಾರೆ. ಇದೇ ವೇಳೆ ಶಿವುಗೆ ನಂದಿನಿ (ಚೈತ್ರರೆಡ್ಡಿ) ಎಂಬ ಹುಡುಗಿಯ ಮೇಲೆ ಲವ್ ಆಗುತ್ತದೆ. ಇಬ್ಬರೂ ಒಬ್ಬರನೊಬ್ಬರು ಬಿಟ್ಟಿರಲಾರದ ಹಂತಕ್ಕೆ ತಲುಪುತ್ತಾರೆ. ಈ ಸಂಧರ್ಭವನ್ನು ಬಳಸಿಕೊಳ್ಳುವ ಪೊಲೀಸರು ನಂದಿನಿಯನ್ನು ಗಾಳವಾಗಿ ಇರಿಸಿಕೊಂಡು ಶಿವುಗೆ ಬಲೆ ಬೀಸುತ್ತಾರೆ. ಆದರೆ ಶಿವು ಸ್ನೇಹಿತರು ಮಾತ್ರ ಪೊಲೀಸರಿಗೆ ಸಿಗುತ್ತಾರೆ ಹೊರತು ಶಿವು ಸಿಗುವುದಿಲ್ಲ.
ಇತ್ತ ನಂದಿನಿಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗುತ್ತದೆ. ಆದರೆ ಇದರಿಂದ ನೊಂದ ನಂದಿನಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಕೆಯ ಅಂತ್ಯಕ್ರಿಯೆಗೆ ಶಿವು ಬರುತ್ತಾನೆ. ಈ ವೇಳೆ ಪೊಲೀಸರು ಅಲರ್ಟ್ ಆಗುತ್ತಾರೆ. ಶಿವು ಪೊಲೀಸರಿಗೆ ಸಿಗುತ್ತಾನೋ ಇಲ್ಲವೊ ಎಂಬುದನ್ನು ನೀವು ಸಿನಿಮಾ ನೋಡಿ ತಿಳಿಯಬೇಕು.
ಸಾಹಸ, ಪ್ರೀತಿ, ಭಾವನೆ, ಸ್ನೇಹದ ವಿಚಾರಗಳು ಕೆಲವೆಡೆ ಬೋರ್ ಎನಿಸಿದರೂ ಸಾಹಸಪ್ರಿಯರಿಗೆ ಸಿನಿಮಾ ಮಜಾ ಕೊಡುತ್ತದೆ. ಒಟ್ಟಿನಲ್ಲಿ ಕಾಡಿನ ಜನರನ್ನು ಕೆಣಕಿದರೆ ಅವರು ಹೇಗೆ ರಾಕ್ಷಸರಂತೆ ಮಾರ್ಪಾಡಾಗುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ವಿನೋದ್ ಪ್ರಭಾಕರ್ ಸಾಹಸಮಯ ದೃಶ್ಯಗಳಲ್ಲಿ ಮಾತ್ರವಲ್ಲದೆ ಪ್ರೀತಿ-ಪ್ರೇಮದಲ್ಲೂ ಸೈ ಎನಿಸಿಕೊಂಡಿದ್ದಾರೆ. ಮೊದಲ ಚಿತ್ರದಲ್ಲೇ ಚೈತ್ರ ರೆಡ್ಡಿ ಕಂಗೊಳಿಸುತ್ತಾರೆ. ರಾಜೇಶ್ ನಟರಂಗ, ನರೇಶ್ ಗೌಡ ಪೊಲೀಸ್ ಅಧಿಕಾರಿಗಳಾಗಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ.
ಅಭಿಮಾನ್ ರಾಯ್ ಸಂಗೀತ ನಿರ್ದೇಶಿಸಿರುವ ಎರಡು ಹಾಡುಗಳು ಬಹಳ ಚೆನ್ನಾಗಿವೆ. ಬೇಲೂರು, ಹಳೇಬೀಡು ಹಾಗೂ ಹಳ್ಳಿ ಸೌಂದರ್ಯವನ್ನು ಛಾಯಾಗ್ರಾಹಕ ಜೈ ಆನಂದ್ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ತಯಾರಾಗಿರುವ ‘ರಗಡ್’ ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.