ಸಾಕಷ್ಟು ಕುತೂಹಲ ಕೆರಳಿಸಿದ್ದ 'ಕವಲುದಾರಿ' ಸಿನಿಮಾ ಇಂದು ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ತೆರೆ ಕಂಡಿದೆ. ಇದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಪಿಆರ್ಕೆ ಬ್ಯಾನರ್ನಿಂದ ಬಿಡುಗಡೆಯಾದ ಮೊದಲ ಸಿನಿಮಾ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಮಾಡಿ ಸಕ್ಸಸ್ ಆಗಿದ್ದ ನಿರ್ದೇಶಕ ಹೇಮಂತ್ ರಾವ್ ಮತ್ತೊಂದು 'ಕವಲುದಾರಿ' ಯಂತ ಒಳ್ಳೆ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸಿನಿಮಾಗೆ ಹೇಮಂತ್ ಅವರೇ ಚಿತ್ರಕಥೆ ಬರೆದಿದ್ದಾರೆ. ಸಿನಿಮಾ ನಿಜಕ್ಕೂ ಸಿನಿಪ್ರಿಯರ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದೆ. ಕ್ರೈಂ ಥ್ರಿಲ್ಲರ್ ಕಥೆ ಆಧರಿಸಿರುವ ಕವಲುದಾರಿ ಸಿನಿಮಾ ಸದ್ಯಕ್ಕೆ ಸಮಾಜದಲ್ಲಿ ನಡೆಯುತ್ತಿರುವ ರಾಜಕೀಯ ವ್ಯವಸ್ಥೆ, ಅಧಿಕಾರದ ಆಸೆ, ಬೇರೆಯವರನ್ನು ಬಲಿ ಕೊಟ್ಟು ನಾನು ಚೆನ್ನಾಗಿರಬೇಕು ಎಂಬ ಮನೋಭಾವ... ಹೀಗೆ ಸೂಕ್ಷ್ಮ ವಿಷಯಗಳ ಬಗ್ಗೆ ಕವಲುದಾರಿ ಸಿನಿಮಾ ಬೆಳಕು ಚೆಲ್ಲುತ್ತದೆ.
ಒಂದು ಕುಟುಂಬದ ಸಾವಿನ ಸುತ್ತ ಆರಂಭವಾಗುವ ಕವಲುದಾರಿ ಸಿನಿಮಾ ಕ್ಷಣ ಕ್ಷಣಕ್ಕೂ ರೋಚಕತೆಯಿಂದ ಕೂಡಿದೆ. ಟ್ರಾಫಿಕ್ ಪೊಲೀಸ್ ಆಗಿ ನಟಿಸಿರುವ ನಾಯಕ ನಟ ಶ್ಯಾಮ್ (ರಿಷಿ)ಗೆ ಕ್ರೈಂ ಬ್ರಾಂಚ್ ಪೊಲೀಸ್ ಆಫೀಸರ್ ಆಗಿ, ಕ್ರೈಂ ಇನ್ವೆಷ್ಟಿಗೇಶನ್ ಮಾಡಬೇಕು ಎಂಬ ಆಸೆ. ಆದರೆ ಮೇಲಾಧಿಕಾರಿಗಳು ಶ್ಯಾಮ್ ಆಸೆಗೆ ತಣ್ಣೀರು ಎರುಚುವ ಕೆಲಸ ಮಾಡುತ್ತಾರೆ. ಆದರೂ ರಿಷಿ ಒಂದು ಕೊಲೆಯ ಕೇಸನ್ನು ಸ್ಟಡಿ ಮಾಡಿ, ಆ ಕೊಲೆಯ ಹಿಂದಿನ ರಹಸ್ಯವನ್ನು ಹೇಗೆ ಬೇಧಿಸುತ್ತಾನೆ ಅನ್ನೋದು ಸಿನಿಮಾದ ಕಥೆ.
ಈ ಕೊಲೆಯ ಸಾಕ್ಷಿಗಳನ್ನು ಕೆದುಕುತ್ತಾ ಹೋದಾಗ ಅನಂತ್ನಾಗ್ ಟೆರಿಫಿಕ್ ಎಂಟ್ರಿ ಥಿಯೇಟರ್ನಲ್ಲಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸುತ್ತದೆ. ಪ್ರಾಮಾಣಿಕ, ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ಮುತ್ತಣ್ಣ ಕ್ಯಾರೆಕ್ಟರ್ ಮಾಡಿರುವ ಅನಂತ್ ನಾಗ್, ನಿಜಕ್ಕೂ ಲೈಫ್ ಟೈಮ್ ಕಾಡುವ ಪಾತ್ರದಲ್ಲಿ ಮಿಂಚಿದ್ದಾರೆ. ಅನಂತ್ನಾಗ್, ನಾಯಕ ನಟ ರಿಷಿ, ಅಚ್ಯುತ್ ಕುಮಾರ್ ಹೊರತುಪಡಿಸಿದರೆ ಇನ್ನುಳಿದ ಎಲ್ಲಾ ನಟ-ನಟಿಯರು ಹೊಸಬರೇ. ಇವರ ಪಾತ್ರಗಳು ಕೂಡಾ ನೋಡುಗರ ಗಮನ ಸೆಳೆಯುತ್ತದೆ. ಬಡಹುಡುಗಿಯಾಗಿ ರೋಷಿಣಿ ಪ್ರಕಾಶ್ ಗಮನ ಸೆಳೆಯುತ್ತಾರೆ.
ಚರಣ್ರಾಜ್ ಸಂಗೀತ ಹಾಗೂ ಅದ್ವೈತ ಅವರ ಕ್ಯಾಮರಾ ವರ್ಕ್ ಚಿತ್ರದ ಪ್ಲಸ್ ಪಾಯಿಂಟ್. ಮೊದಲಾರ್ಧದಲ್ಲಿ ಬರುವ ಒಂದೊಂದು ದೃಶ್ಯ ಹಾಗೂ ಸನ್ನಿವೇಶಗಳು, ಥಿಯೇಟರ್ನಲ್ಲಿ ಕುಳಿತ ಪ್ರೇಕ್ಷಕರಿಗೆ ಕ್ಷಣ ಕ್ಷಣಕ್ಕೂ ಏನಾಗುತ್ತೆ ಎಂಬ ಕುತೂಹಲವನ್ನು ಹೆಚ್ಚಿಸುತ್ತವೆ. ಸೆಕೆಂಡ್ ಆಫ್ ಸ್ವಲ್ಪ ಬೋರ್ ಎನಿಸಿದರೂ ಅನಂತ್ನಾಗ್ ಚಾರ್ಮಿಂಗ್, ರಿಷಿ ಅಭಿನಯ ಈ ಗ್ಯಾಪ್ ತುಂಬುತ್ತದೆ.
ಪಿಆರ್ಕೆ ಪ್ರೊಡಕ್ಷನ್ ಬ್ಯಾನರ್ ಅಡಿ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಿಸಿರುವ 'ಕವಲುದಾರಿ' ಸಮಾಜಕ್ಕೆ ಒಂದೊಳ್ಳೆ ಸಂದೇಶ ನೀಡಿರುವ ಸಿನಿಮಾವಾಗಿದೆ. ಹಾಗೇ ಪೊಲೀಸರ ಬಗ್ಗೆ ಜನರಿಗೆ ಇರುವ ಅಸಮಾಧಾನವನ್ನು ಈ ಸಿನಿಮಾ ಹೋಗಲಾಡಿಸುತ್ತದೆ.