ಸಾಕಷ್ಟು ನಿರೀಕ್ಷೆಯೊಂದಿಗೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಇಂದು ರಾಜ್ಯಾದ್ಯಂತ ತರೆಗಪ್ಪಳಿಸಿದೆ.
ಮೂರನೇ ಬಾರಿಗೆ ಅಪ್ಪು ಸಿನಿಮಾಗೆ ರಾಕ್ಲೈನ್ ಪ್ರೊಡಕ್ಷನ್ ಬಂಡವಾಳ ಹಾಕಿದ್ದು, ಅದ್ದೂರಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರ ಹೇಗಿದೆ ಅನ್ನೋದನ್ನ ನೋಡೋಣ..
ಯಾವುದೇ ಪಾತ್ರವಾದರೂ ಪುನೀತ್ ಲೀಲಾಜಾಲವಾಗಿ ನಟಿಸುತ್ತಾರೆ. ನಟಸಾರ್ವಭೌಮ ಹೆಸರಿನ ಈ ಸಿನಿಮಾಗೆ ಪುನೀತ್ ಸಂಪೂರ್ಣ ನ್ಯಾಯ ಸಲ್ಲಿಸಿದ್ದಾರೆ. ಪುನೀತ್ ಹಾಗೂ ಇತರ ಪಾತ್ರಗಳ ನಟನೆ, ಪವನ್ ಒಡೆಯರ್ ನಿರೂಪಣೆ ಚಿತ್ರದ ಪ್ಲಸ್ ಪಾಯಿಂಟ್.
ಚಿತ್ರದಲ್ಲಿ ಭಾವನಾತ್ಮಕ ಅಂಶಗಳು ಕೊಂಚ ಕಡಿಮೆ. ಆದರೆ ಪುನೀತ್ ರಾಜ್ಕುಮಾರ್ ಎಲ್ಲ ಸಂದರ್ಭಗಳನ್ನು ನಿಭಾಯಿಸಿರುವ ರೀತಿ ಬಹಳ ಸೊಗಸಾಗಿದೆ. ಒಮ್ಮೆ ಲವರ್ಬಾಯ್ ಆಗಿ, ಮತ್ತೊಮ್ಮೆ ಪತ್ರಕರ್ತ ಆಗಿ ಪವರ್ಸ್ಟಾರ್ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಸಾಹಸ ಸನ್ನಿವೇಶ ಹಾಗೂ ಡ್ಯಾನ್ಸ್ನಲ್ಲಿ ಪುನೀತ್ ನಿಜಕ್ಕೂ ಸೂಪರ್..!
ಚಿತ್ರ ಕೋಲ್ಕತ್ತಾದಲ್ಲಿ ಆರಂಭವಾಗಿ ನಂತರ ಬೆಂಗಳೂರಿಗೆ ಶಿಪ್ಟ್ ಆಗುತ್ತದೆ. ಕೋಲ್ಕತ್ತಾದ ದೃಶ್ಯಗಳು ಉತ್ತಮವಾಗಿ ತೆರೆಮೇಲೆ ಕಾಣಿಸಿದೆ. ಮೊದಲಾರ್ಧ ಅನುಪಮಾ ಪರಮೇಶ್ವರನ್, ದ್ವಿತೀಯಾರ್ಧದಲ್ಲಿ ರಚಿತಾ ರಾಮ್ ಪುನೀತ್ಗೆ ಜೋಡಿಯಾಗಿದ್ದಾರೆ.
ನಟಸಾರ್ವಭೌಮ ಹೆಚ್ಚು ಕುತೂಹಲವನ್ನು ಹೊಂದಿರುವುದು ಚಿತ್ರದ ದ್ವಿತೀಯಾರ್ಧದಲ್ಲಿ. ದೆವ್ವ ಇದೆಯ ಇಲ್ಲವೇ ಎನ್ನುವುದಕ್ಕೆ ನಾಯಕ ಸೂಕ್ತ ಉತ್ತರ ನೀಡುತ್ತಾನೆ.
ರವಿಶಂಕರ್ ಅವರ ಅಬ್ಬರದ ಮಾತುಗಳು, ಪ್ರಭಾಕರ್ (ಬಾಹುಬಲಿ ಖ್ಯಾತಿ) ತೀಕ್ಷ್ಣ ಓಟ, ಅಚ್ಯುತ್ ಕುಮಾರ್ ಅವರ ಸಂಯಮ, ಅವಿನಾಶ್, ಶ್ರೀನಿವಾಸಮೂರ್ತಿ, ಶ್ರೀನಿವಾಸಪ್ರಭು ಮತ್ತು ಪ್ರಕಾಶ್ ಬೆಳವಾಡಿ ಅಭಿನಯ ಆಯ್ಕೆ ಸೂಕ್ತವಾಗಿದೆ. ಚಿಕ್ಕಣ್ಣ ಹಾಗೂ ಸಾಧು ಕೋಕಿಲ ಕಾಮಿಡಿ ಟ್ರ್ಯಾಕ್ ಉತ್ತಮವಾಗಿದೆ.
ವೈದಿ ಅವರ ಛಾಯಾಗ್ರಹಣ ಪ್ರತಿಯೊಂದು ಫ್ರೇಮ್ ಅನ್ನು ಚಂದವಾಗಿ ಕಾಣಿಸುವಂತೆ ಮಾಡಿದೆ. ಡಿ.ಇಮಾನ್ ಸಂಗೀತ ಇಂಪಾಗಿದೆ.
ಒಟ್ಟಾರೆ ಈ ಸಿನಿಮಾ ಅಪ್ಪು ಅಭಿಮಾನಿಗಳಿಗೆ ಮಾತ್ರವಲ್ಲಿ ಕನ್ನಡ ಚಿತ್ರಪ್ರೇಮಿಗಳಿಗೂ ರಸದೌತಣ.