ನಿನ್ನೆಯಷ್ಟೆ ಸುಮಲತಾ ಅಂಬರೀಶ್ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ವಿಜಯ ಸಿಕ್ಕಿದೆ. ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಮಂಡ್ಯದ ನೂತನ ಸಂಸದೆಗೆ ಈಗ ಮತ್ತೊಂದು ಸಂಭ್ರಮ. ಅದೇ, ಅವರು ನಟಿಸಿರುವ ಡಾಟರ್ ಆಫ್ ಪಾರ್ವತಮ್ಮ ಸಿನಿಮಾ ಇಂದು ತೆರೆಗೆ ಬಂದಿದೆ. ಬಹುನಿರೀಕ್ಷೆ ಮೂಡಿಸಿದ್ದ ಈ ಚಿತ್ರದಲ್ಲಿ ಹರಿಪ್ರಿಯಾ ವೈದೇಹಿ ಪಾತ್ರ, ಇವರ ತಾಯಿ ಪಾತ್ರದಲ್ಲಿ ಸುಮಲತಾ ಅಂಬರೀಶ್ (ಪಾರ್ವತಮ್ಮ ) ನಟಿಸಿದ್ದಾರೆ.
ಚಿತ್ರಕಥೆ ಏನು ?
ವೈದೇಹಿ ಮನೆಯ ಹಿರಿ ಮಗಳು. ಅವರಮ್ಮನಿಗೆ (ಸುಮಲತಾ ಅಂಬರೀಶ್) ಮಗಳ ಬೆಳವಣಿಗೆ ಬಗ್ಗೆ ಹೆಮ್ಮೆ. ಆದರೆ, ಬೇಗನೆ ಮಗಳ ಮದುವೆ ಆಗಲಿ ಎಂಬುದು ಅವರ ಬಯಕೆ. ವೈದೇಹಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿರುತ್ತಾಳೆ. ಆದರೆ, ಪರೀಕ್ಷೆಯಲ್ಲಿ ಫೇಲಾದೆ ಎಂದು ಆತ ಆತ್ಮಹತ್ಯೆಗೆ ಶರಣಾಗುತ್ತಾನೆ. ಆಮೇಲೆ ಪೊಲೀಸ್ ವೃತ್ತಿಗೆ ಸೇರಿದ ವೈದೇಹಿ, ತನ್ನ ಕೆಲಸದಲ್ಲಿ ಬ್ಯುಸಿಯಾಗುತ್ತಾಳೆ. ಅಮ್ಮನಿಗೆ ಮಾತ್ರ ಮಗಳ ಮದುವೆ ಚಿಂತೆ ಕೊರೆಯುತ್ತಲೇ ಇರುತ್ತದೆ.
ಈ ನಡುವೆಯೇ ಒಂದು ಕೊಲೆ ಪ್ರಕರಣದ ತನಿಖೆಯನ್ನು ವೈದೇಹಿಗೆ ಒಪ್ಪಿಸಲಾಗುತ್ತದೆ. ಅದು ನಿಗೂಢ ಪ್ರಕರಣ. ಕೊಲೆ ಮಾಡಿದ ಆಸಾಮಿ ಪೊಲೀಸರ ದಿಕ್ಕು ತಪ್ಪಿಸಲು ಹಲವಾರು ತಂತ್ರಗಳನ್ನು ಹೂಡಿರುತ್ತಾನೆ. ಅದೆನ್ನೆಲ್ಲ ಬೇಧಿಸುವ ಹೊತ್ತಿಗೆ ಒಂದು ಕಡೆ ವೈದೇಹಿ ಒಬ್ಬ ಸಾಮಾನ್ಯ ಡೆಲಿವರಿ ಹುಡುಗನನ್ನು ಇಷ್ಟ ಪಡುತ್ತಾಳೆ. ಆತನನ್ನೇ ಮದುವೆ ಆಗಲು ನಿರ್ಧರಿಸುತ್ತಾಳೆ. ಈತನೊಂದಿಗೆನೇ ವೈದೇಹಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆಯೇ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕು. ಇತ್ತ ವೈದೇಹಿ ಕೊಲೆ ಕೇಸ್ ಬಗೆಹರಿಸುವ ರೀತಿ ಕೊನೆಯ ಅರ್ಧ ಗಂಟೆಯಲ್ಲಿ ಕುತೂಹಲವಾಗಿದೆ.
ಸುಮಲತಾ ಅಂಬರೀಶ್ ಅವರು ನಿನ್ನೆ ತಾನೇ ಲೋಕಸಭಾ ಸದಸ್ಯೆಯಾಗಿದ್ದಾರೆ. ಇಂದು ಅವರ ಚಿತ್ರ ಬಿಡುಗಡೆ ಆಗಿದೆ. ಅಮ್ಮನಾಗಿ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹರಿಪ್ರಿಯಾ ಅವರಿಗೆ ವೃತ್ತಿ ಜೀವನದಲ್ಲಿ ಇದು ಹೊಸ ಬಗೆಯ ಪಾತ್ರ. ಹೆಚ್ಚು ಗದ್ದಲ ಇಲ್ಲದೆ ತನಿಖೆ ಮಾಡುವ ಅಧಿಕಾರಿ. ಸೂರಜ್ ಗೌಡ ಪೂಜಾರಿ ಆಗಿ, ಪ್ರಭು ಡೆಲಿವರಿ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲಲ್ಲಿ ನಗಿಸಲು ತರಂಗ ವಿಶ್ವ ಇದ್ದಾರೆ.
ಡಾಲಿ ಧನಂಜಯ್ ಅವರ ರಚನೆಯ 'ಜೀವಾಕಿಂತ'....ಹಾಡು ಸರಿಯಾದ ಸಮಯಕ್ಕೆ ಬಳಸಲಾಗಿದೆ. ಮತ್ತೊಂದು ಗೀತೆಗೆ ಸುಗಮ ಸಂಗೀತ ಶೈಲಿಯಲ್ಲಿ ಮಿಥುನ್ ಮುಕುಂದನ್ ಮಾಧುರ್ಯದಿಂದ ರಾಗ ತುಂಬಿಸಿದ್ದಾರೆ. ಛಾಯಾಗ್ರಾಹಕ ಅರುಳ್ ಸೋಮಸುಂದರಂ ಅವರಲ್ಲಿ ಹೇಳಿಕೊಳ್ಳುವಂತಹ ಸ್ಪೆಷಲ್ ಛಾಯಾಗ್ರಹಣ ಮೂಡಿಬಂದಿಲ್ಲ.
‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರವನ್ನ ಮೊದಲರ್ಧ ತಾಳ್ಮೆಯಿಂದ ಕಾದು ಕುಳಿತು ನೋಡಿದರೆ ಆಮೇಲೆ ಪ್ರೇಕ್ಷಕರಿಗೆ ಕುತೂಹಲದ ಬುತ್ತಿ ಬಿಚ್ಚಿಕೊಳ್ಳುತ್ತದೆ.