ವಾಷಿಂಗ್ಟನ್: ಅಮೆರಿಕದ ಟೆಲಿವಿಷನ್ ಸಿಟ್ಕಾಮ್ 'ದಿ ಗೋಲ್ಡನ್ ಗರ್ಲ್ಸ್' ಮತ್ತು 'ದಿ ಮೇರಿ ಟೈಲರ್ ಮೂರ್ ಶೋ'ನ ಖ್ಯಾತ ನಟಿ, ಎಮ್ಮಿ ಪ್ರಶಸ್ತಿ ವಿಜೇತೆ ಬೆಟ್ಟಿ ವೈಟ್ ನಿನ್ನೆ ವಿಧಿವಶರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು. ಜನ್ಮಶತಮಾನೋತ್ಸವದ ಸಂಭ್ರಮದಲ್ಲಿದ್ದ ಅವರ ನಿಧನಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ.
1922 ರಲ್ಲಿ ಜನಿಸಿದ್ದ ಬೆಟ್ಟಿ ವೈಟ್ ಜನವರಿ 17 ರಂದು ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಿದ್ಧರಾಗಿದ್ದರು ಎಂದು ಬೆಟ್ಟಿ ಅವರ ಏಜೆಂಟ್ ಜೆಫ್ ವಿಟ್ಜರ್ ತಿಳಿಸಿದ್ದಾರೆ. ಮನರಂಜನೆಗಾಗಿ ಸುದೀರ್ಘ ಟಿವಿ ವೃತ್ತಿಜೀವನದಲ್ಲಿ ಬೆಟ್ಟಿ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.
ಅಮೆರಿಕ ಅಧ್ಯಕ್ಷ ಬೈಡನ್ ಸೇರಿ ಗಣ್ಯರಿಂದ ಕಂಬನಿ..
ಬೆಟ್ಟಿ ವೈಟ್ ನಿಧನಕ್ಕೆ ಸಂತಾಪ ಸೂಚಿಸಿರುವ ಯುಎಸ್ ಅಧ್ಯಕ್ಷ ಜೋ ಬೈಡನ್, ಬೆಟ್ಟಿ ಸಾಂಸ್ಕೃತಿಕ ಐಕಾನ್ ಎಂದು ಬಣ್ಣಿಸಿದ್ದಾರೆ. ಬೆಟ್ಟಿ ವೈಟ್ ಅನ್ನು ಯಾರು ಪ್ರೀತಿಸಲಿಲ್ಲ ಹೇಳಿ? ಆಕೆಯ ಸಾವಿನ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಗಿದೆ ಎಂದು ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ.
ಹಾಲಿವುಡ್‌ನಲ್ಲಿ 80 ವರ್ಷಗಳ ಸುದೀರ್ಘ ವೃತ್ತಿಜೀವನ..
1922ರಲ್ಲಿ ಇಲಿನಾಯ್ಸ್‌ನ ಓಕ್‌ಲ್ಯಾಂಡ್‌ನಲ್ಲಿ ಜನಿಸಿದ ವೈಟ್ 1930ರ ದಶಕದ ಅಂತ್ಯದಲ್ಲಿ ಟಾಕ್ ರೇಡಿಯೊದಲ್ಲಿ ತನ್ನ ಮನರಂಜನಾ ವೃತ್ತಿಯನ್ನು ಪ್ರಾರಂಭಿಸಿದ್ದರು. 'ಹಾಟ್ ಇನ್ ಕ್ಲೀವ್‌ಲ್ಯಾಂಡ್' ನಲ್ಲಿನ ಪಾತ್ರ ಒಳಗೊಂಡಂತೆ ತನ್ನ 90ರ ಇಳಿ ವಯಸ್ಸಿನಲ್ಲೂ ತೆರೆಯ ಮೇಲೆ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು.
2010ರಲ್ಲಿ 88ನೇ ವಯಸ್ಸಿನಲ್ಲಿ ವೈಟ್ ಅವರು ಅಮೆರಿಕನ್ ಕಾಮಿಡಿ ಸ್ಕೆಚ್ ಶೋ 'ಸ್ಯಾಟರ್ಡೇ ನೈಟ್ ಲೈವ್' ನ ಅತ್ಯಂತ ಹಳೆಯ ಹೋಸ್ಟ್ ಆಗಿದ್ದರು. ಈ ಅನುಭವವನ್ನು ಅವರು ಬಹುಶಃ ನಾನು ಹೊಂದಿದ್ದ ಅತ್ಯಂತ ಮೋಜಿನ ಹಾಗೂ ಭಯಾನಕ ನಟನೆ ಎಂದು ಕರೆದಿದ್ದರು.