ಖ್ಯಾತ ನಿರ್ದೇಶಕ ಯೋಗರಾಜ ಭಟ್ ಒಬ್ಬ ಕ್ರಿಯೇಟಿವ್ ಡೈರೆಕ್ಟರ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಟ್ಟರ ಪಡಸಾಲೆಯಿಂದ ಇದೀಗ ಹೊಚ್ಚ ಹೊಸ ಸಿನಿಮಾವೊಂದು ನಿರ್ಮಾಣ ಆಗ್ತಿದೆ. ಆ ಸಿನಿಮಾವೇ 'ಪದವಿ ಪೂರ್ವ'.
ಆದ್ರೆ ಈ ಸಿನಿಮಾಕ್ಕೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳುತ್ತಿಲ್ಲ. ಬದಲಾಗಿದೆ, ಈ ಸಿನಿಮಾದ ನಿರ್ಮಾಣದ ಜವಾಬ್ದಾರಿ ಹೊತ್ತು, ಪ್ರೊಡ್ಯೂಸರ್ ಕ್ಯಾಪ್ ಧರಿಸುತ್ತಿದ್ದಾರೆ. ಈ ಹಿಂದೆ 'ಇಂತಿ ನಿನ್ನ ಪ್ರೀತಿಯ', 'ಪಂಚರಂಗಿ', 'ಲೈಫು ಇಷ್ಟೇನೇ', 'ವಾಸ್ತು ಪ್ರಕಾರ', 'ಮುಗುಳುನಗೆ' ಮತ್ತು 'ಪಂಚ ತಂತ್ರ' ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು.

ಇದೀಗ ಮತ್ತೆ ಸಿನಿಮಾ ನಿರ್ಮಾಣಕ್ಕೆ ಇಳಿದಿರುವ ಇವರು ಪದವಿ ಪೂರ್ವ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ 2020 ಜನವರಿ ತಿಂಗಳಿನಲ್ಲಿ ಸೆಟ್ಟೇರಲಿದೆ ಎಂದು ಹೇಳಲಾಗ್ತಿದೆ. ಸದ್ಯ ಭಟ್ರು ‘ಗಾಳಿಪಟ 2’ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.
‘ಪದವಿ ಪೂರ್ವ’ ಸಿನಿಮಾದಿಂದ ಪೃಥ್ವಿ ಶಾಮನೂರು ನಾಯಕನಾಗಿ ಸ್ಯಾಂಡಲ್ವುಡ್ಗೆ ಪರಿಚಯ ಆಗುತ್ತಿದ್ದಾರೆ. ವಿಶೇಷ ಅಂದ್ರೆ ಇವರ ತಂದೆ ರವಿ ಶಾಮನೂರು ಪದವಿ ಪೂರ್ವ ಸಿನಿಮಾ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.
ಈ ಸಿನಿಮಾಕ್ಕೆ ಕಾಲೇಜಿನ ದಿವಸಗಳೇ ಕಥಾ ವಸ್ತು. ಯುವಕರ ತಲ್ಲಣ, ಆಕಾಂಕ್ಷೆ ಇಲ್ಲಿ ಪ್ರಮುಖ. ಭಟ್ಟರು ಕಾಲೇಜು ವಿಧ್ಯಾರ್ಥಿಗಳ ಕುರಿತು ಅನೇಕ ಗೀತೆಗಳನ್ನು ರಚಿಸಿದ್ದಾರೆ. ಇಲ್ಲಿಯೂ ಅವರ ಗೀತ ಸಾಹಿತ್ಯ ಮುಂದೆವರೆಯಲಿದೆ.

ಹರಿಪ್ರಸಾದ್ ಜಯಣ್ಣ ಈ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇವರಿಗೆ ಭಟ್ಟರ ಜೊತೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದ ಅನುಭವವಿದೆ. ಇನ್ನು ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಸಂತೋಷ್ ರಾಯ್ ಪಾತಾಜೆ ಛಾಯಾಗ್ರಾಕರಾಗಿ ಆಯ್ಕೆಯಾಗಿದ್ದಾರೆ.
