ಬೆಂಗಳೂರು: 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ನಿನ್ನೆ ಸಂಜೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವರ್ಣರಂಜಿತವಾಗಿ ಉದ್ಘಾಟನಾ ಸಮಾರಂಭ ನೆರವೇರಿದೆ.
ಸಿನಿಮೋತ್ಸವದ ಮಾಹಿತಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಮನವಿಯೊಂದನ್ನು ಮಾಡಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಕಲಾವಿದರಿದ್ದಾರೆ. ಇಲ್ಲಿನ ಯುವಕರಿಗೆ ತುಂಬಾ ಹುರುಪಿದೆ. ಆದರೆ ಒಂದು ಒಳ್ಳೆಯ ಸ್ಟುಡಿಯೋ ಇಲ್ಲ. ನಾವು ಬೇರೆ ರಾಜ್ಯಗಳಿಗೆ ಹೋಗಿ ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ಒಂದು ಸ್ಟುಡಿಯೋವನ್ನು ಕಟ್ಟಿಸಿಕೊಡಿ ಎಂದು ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಒಳ್ಳೆಯ ನಿರ್ದೇಶಕರು, ತಂತ್ರಜ್ಞರು ಕ್ಯಾಮರಾಮನ್ಗಳು ಇಂಡಸ್ಟ್ರಿಗೆ ಬರುತ್ತಿದ್ದಾರೆ. ಇಡೀ ಭಾರತೀಯ ಚಿತ್ರರಂಗವನ್ನು ಆಳುವಂತಹ ಸಾಮರ್ಥ್ಯ ಇರುವ ಪ್ರತಿಭಾವಂತರು ನಮ್ಮಲ್ಲಿ ಇದ್ದಾರೆ. ಅವರಿಗೆಲ್ಲ ಅನುಕೂಲ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು. 80ರ ದಶಕದಲ್ಲಿ ಸಿನಿಮಾ ಬಗ್ಗೆ ಏನಾದರೂ ಕಲಿಯಬೇಕಾದರೆ ಚೆನ್ನೈಗೆ ಹೋಗಬೇಕಿತ್ತು. ಆದರೆ ಈಗ ನಮ್ಮವರು ಏಕಲವ್ಯನ ರೀತಿ ತಾವೇ ಅಲ್ಲಿ ಇಲ್ಲಿ ನೋಡಿ ಕೆಲಸ ಕಲಿಯುತ್ತಿದ್ದಾರೆ ಎಂದರು. ಅವರಿಗೆ ಒಂದು ಸ್ಟುಡಿಯೋ ಬೇಕಿದೆ. ಒಂದು ಅವಕಾಶ ಕೊಟ್ಟು ನೋಡಿ ನಿಮಗೆ ಹಲವು ಸಾಧನೆಗಳನ್ನು ಕೊಡುತ್ತೇವೆ. 80ರ ದಶಕದಲ್ಲಿ ಚಿತ್ರರಂಗವನ್ನು ಮತ್ತೆ ಮರುಕಳಿಸುವಂತೆ ನಮ್ಮವರು ಮಾಡುತ್ತಾರೆ ಎಂದು ಯಶ್ ಹೇಳಿದರು.