ಬೆಂಗಳೂರು: ನಿರ್ದೇಶಕ ಎ.ಪಿ. ಅರ್ಜುನ್ ಚಂದನವನಕ್ಕೆ ವಿಭಿನ್ನ ಚಿತ್ರಗಳನ್ನು ಕೊಟ್ಟವರು. ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಸ್ಟರ್ ಹಾಕಿರುವ ಅರ್ಜುನ್ ಜನವರಿ ಒಂದರಂದು ಬೆಳಗ್ಗೆ 09:15ಕ್ಕೆ ತಮ್ಮ ಕನಸಿನ ಚಿತ್ರದ ಕುರಿತಾಗಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ.
ಕಿಸ್ ನಂತರ ಅರ್ಜುನ್ ಮೂರು ಚಿತ್ರಗಳನ್ನು ಘೋಷಿಸಿದ್ದಾರೆ. ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಹೇಳಿಕೊಂಡಿದ್ದರು. ಆನಂತರ, ಧ್ರುವ ಸರ್ಜಾ ಹುಟ್ಟು ಹಬ್ಬದಂದು ಧ್ರುವ ಜೊತೆ ಸಿನಿಮಾ ಮಾಡುತ್ತೇನೆ ಎಂದಿದ್ರು. ಇದಲ್ಲದೆ ಕಿಸ್ ಚಿತ್ರದ ಹಿರೋ ವಿರಾಟ್ಗೆ ಮತ್ತೊಂದು ಚಿತ್ರ ನಿರ್ದೇಶಿಸುವುದಾಗಿ ಹೇಳಿದ್ರು. ಈಗ ಅರ್ಜುನ್ ಅಕೌಂಟ್ನಲ್ಲಿ ಮೂರು ಸಿನಿಮಾಗಳಿದ್ದು, ಯಾವುದನ್ನು ಕೈಗೆತ್ತಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ.
ಈ ಪೈಕಿ ನಿಖಿಲ್ ಕುಮಾರ್ ಅಥವಾ ಧ್ರುವ ಅಭಿನಯದಲ್ಲಿ ಅರ್ಜುನ್ ಚಿತ್ರ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಇವೆರೆಡೂ ಬಿಗ್ ಬಜೆಟ್ ಚಿತ್ರಗಳಷ್ಟೇ ಅಲ್ಲ, ಅರ್ಜುನ್ಗೆ ದೊಡ್ಡ ಬ್ರೇಕ್ ನೀಡುವಂತಹ ಚಿತ್ರಗಳು. ಈ ಪೈಕಿ ನಿಖಿಲ್ ಜೊತೆಗೆ ಇದುವರೆಗೂ ಅರ್ಜುನ್ ಕೆಲಸ ಮಾಡಿಲ್ಲ. ಇನ್ನು ಧ್ರುವ ಸರ್ಜಾರನ್ನು ಕನ್ನಡ ಚಿತ್ರರಂಗಕ್ಕೆ ಅದ್ಧೂರಿ ಮೂಲಕ ಪರಿಚಯಿಸಿದ್ದು ಇದೇ ಅರ್ಜುನ್. ಹಾಗಾಗಿ ಇವೆರೆಡರಲ್ಲಿ ಯಾವ ಚಿತ್ರ ಘೋಷಿಸಿದರೂ ಅವರಿಗೆ ಪ್ಲಸ್ ಆಗುವುದು ಖಂಡಿತಾ. ಆದರೆ, ಈ ಎರಡೂ ಚಿತ್ರಗಳು ಶುರುವಾಗುವುದಕ್ಕೆ ಸ್ವಲ್ಪ ಸಮಯ ಬೇಕು. ಏಕೆಂದರೆ, ನಿಖಿಲ್ ಅಭಿನಯದ ಹೊಸ ಸಿನಿಮಾದ ಶೂಟಿಂಗ್ ಸ್ವಲ್ಪ ಮುಗಿದಿದೆ. ಇನ್ನು ಧ್ರುವ ಅಭಿನಯದ ದುಬಾರಿ ಇನ್ನಷ್ಟೇ ಶುರುವಾಗಬೇಕಿದೆ. ಅಷ್ಟರಲ್ಲಿ ಅರ್ಜುನ್ ವಿರಾಟ್ ಅಭಿನಯದ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.