ಕನ್ನಡ ಚಿತ್ರರಂಗದಲ್ಲಿ ಕಲಾವಿದರ ಸಂಘದ ಅಧ್ಯಕ್ಷರಾಗಿ ರೆಬಲ್ ಸ್ಟಾರ್ ಅಂಬರೀಶ್ ಇದ್ದರು. ಆದರೆ ಈಗ ಅವರು ನಮ್ಮೊಂದಿಗೆ ಇಲ್ಲ. ಅಂಬಿ ನಮ್ಮನ್ನು ಅಗಲಿ 2 ವರ್ಷಗಳಾಗುತ್ತಾ ಬರುತ್ತಿದೆ. ಕಳೆದ ತಿಂಗಳು ಅಂಬಿ ಇಲ್ಲದೆ ಎರಡನೇ ವರ್ಷದ ಹುಟ್ಟುಹಬ್ಬ ಕೂಡಾ ಆಚರಿಸಲಾಗಿದೆ.
ಅಂಬರೀಶ್ ನಿಧನರಾದಾಗಿನಿಂದ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನ ಖಾಲಿ ಉಳಿದಿದೆ. ಚಿತ್ರರಂಗದ ಹಿರಿಯಣ್ಣನಾಗಿ, ಕಲಾವಿದರ ಸಂಘದ ಅಧ್ಯಕ್ಷರಾಗಿ ಅಂಬರೀಶ್ ಚಿತ್ರರಂಗದ ಯಾವುದೇ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ಬಗೆಹರಿಸುತ್ತಿದ್ದರು. ಅಂಬರೀಶ್ ಮಾತುಗಳನ್ನು ಎಲ್ಲರೂ ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಇಂತ ಪ್ರಭಾವಿ ನಾಯಕನನ್ನು ಕಳೆದುಕೊಂಡು ಚಿತ್ರರಂಗ ಕೂಡಾ ಅನಾಥವಾಗಿದೆ. ಇದೀಗ ಕನ್ನಡ ಚಿತ್ರರಂಗದ ಕಲಾವಿದರ ಸಂಘದ ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಕನ್ನಡ ಚಿತ್ರರಂಗದಲ್ಲಿ ಹಿರಿಯ ನಟರು ಹಾಗೂ ಪ್ರಭಾವಿ ನಾಯಕರು ಎಂದು ಬಂದಾಗ ಈ ಸಾಲಿನಲ್ಲಿ ಡಾ. ಶಿವರಾಜ್ ಕುಮಾರ್ ಹಾಗೂ ಡಾ. ರವಿಚಂದ್ರನ್ ಹೆಸರು ಕೇಳಿ ಬಂದಿತ್ತು. ಏಕೆಂದರೆ ಈ ಇಬ್ಬರು ನಟರು ಸಮಕಾಲೀನರು. ಇನ್ನು ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಹೀಗಾಗಿ ಈ ಇಬ್ಬರಲ್ಲಿ ಒಬ್ಬರು ಅಧ್ಯಕ್ಷರಾಗುತ್ತಾರೆ ಎಂದು ಅಂಬರೀಶ್ ನಿಧನದ ಬಳಿಕ ಮಾತು ಕೇಳಿ ಬಂದಿತ್ತು. ನಂತರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮತ್ತೊಂದು ಪ್ರಭಾವಿ ಹೆಸರು ಕೇಳಿಬಂದಿತ್ತು.
ಕಲಾವಿದರ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಬಿ. ಸರೋಜಾದೇವಿ ಅವರನ್ನು ನೇಮಿಸುವ ಉದ್ದೇಶದಿಂದ ನಿರ್ಮಾಪಕ ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ಲೈನ್ ವೆಂಕಟೇಶ್ ಮತ್ತು ಖಜಾಂಚಿ ದೊಡ್ಡಣ್ಣ ಬಿ. ಸರೋಜಾದೇವಿ ಅವರ ಬಳಿ ಕೇಳಿದ್ದಾರೆ. ಆದರೆ ಬಿ. ಸರೋಜಾದೇವಿ ಅವರು ನನಗೆ ವಯಸ್ಸಾಗಿದೆ. ಈ ಸಮಯದಲ್ಲಿ ನಾನು ಇಷ್ಟು ದೊಡ್ಡ ಜವಾಬ್ದಾರಿ ಹೊರಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ನಂತರ ರಾಕ್ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಅವರಿಗೆ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ನೆನಪಾಗಿದ್ದಾರೆ. ಸುಮಲತಾ ಅವರು ಸಂಸದೆ ಕೂಡಾ ಆಗಿರುವುದರಿಂದ ಚಿತ್ರೋದ್ಯಮಕ್ಕೂ ಒಳ್ಳೆಯದು ಎಂದು ಪ್ಲ್ಯಾನ್ ಮಾಡಲಾಗಿದೆ. ಇನ್ನು ಸುಮಲತಾ ಅಧ್ಯಕ್ಷರಾದರೆ ಯಾರ ವಿರೋಧ ಕೂಡಾ ಇರುವುದಿಲ್ಲ. ಏಕೆಂದರೆ ಬಹುತೇಕ ಎಲ್ಲಾ ಕಲಾವಿದರೊಂದಿಗೆ ಸುಮಲತಾ ಒಳ್ಳೆ ಬಾಂಧವ್ಯ ಹೊಂದಿದ್ದಾರೆ. ಸದ್ಯಕ್ಕೆ ಸುಮಲತಾ ಅವರು ಪತಿ ಅಂಬರೀಶ್ ಅವರಷ್ಟೇ ಪ್ರಭಾವಿಯಾಗಿದ್ದಾರೆ ಹಾಗಾಗಿ ಸುಮಲತಾ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಎನ್ನಲಾಗುತ್ತಿದೆ.
ಕೆಲವೇ ದಿನಗಳಲ್ಲಿ ಕಲಾವಿದರ ಸಂಘದ ಎಲ್ಲಾ ಸದಸ್ಯರು ಸಭೆ ಕರೆದು ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ರಾಕ್ಲೈನ್ ವೆಂಕಟೇಶ್ ಹಾಗೂ ಡೊಡ್ಡಣ್ಣ ಹೇಳಿದ್ದಾರೆ.