ಕನ್ನಡದ ‘ವೀಕ್ ಎಂಡ್’ ಸಿನಿಮಾ ಬಗ್ಗೆ ಇದುವರೆವಿಗೂ ಸೀಕ್ರೆಟಾಗಿಟ್ಟಿದ್ದ ವಿಚಾರವೊಂದು ರಿವೀಲ್ ಆಗಿದೆ. ಈ ಚಿತ್ರದಲ್ಲಿಯೂ ಕೂಡ ಅಪ್ಪ ಹಾಗೂ ಮಗನ ವ್ಯಾಮೋಹ ಅಡಕವಾಗಿದೆ.
ಹೌದು, ಮಗನ ಚಿತ್ರಕ್ಕೆ ಅಪ್ಪನೇ ಹಣ ಹಾಕಿದ್ದ 'ಖನನ್' ಚಿತ್ರ ಕಳೆದ ವಾರವಷ್ಟೆ ತೆರೆ ಕಂಡಿತ್ತು. ಇದೀಗ 'ವೀಕ್ ಎಂಡ್' ಅದು ಪುನರಾವರ್ತನೆಯಾಗಿದೆ. ಈ ಚಿತ್ರದ ನಾಯಕ ಮಿಲಿಂದ್ ನಿರ್ಮಾಪಕ ಡಿ.ಮಂಜುನಾಥ್ ಅವರ ಪುತ್ರ ಎಂಬುದು ಬಹಿರಂಗವಾಗಿದೆ. ಈ ಚಿತ್ರಕಥೆಯಲ್ಲಿ ತಾತ ಹಾಗೂ ಮೊಮ್ಮಗನ ವ್ಯಾಮೋಹ ಇದ್ದರೆ, ಚಿತ್ರದಿಂದ ಆಚೆಗೆ ಇದು ಅಪ್ಪ ಹಾಗೂ ಮಗನ ವ್ಯಾಮೋಹ ಕಂಡುಬರುತ್ತಿದೆ.
ಡಿ.ಮಂಜುನಾಥ್ ಮೊದಲು ಸುನಿಲ್ ಕುಮಾರ್ ದೇಸಾಯಿ ಅವರ ‘ಉದ್ಘರ್ಷ’ ಸಿನಿಮಾಕ್ಕೆ ಹಣ ಹೂಡಿ ಮಧ್ಯದಲ್ಲೇ ವಾಪಸ್ಸು ಬಂದಿದ್ದರು. ಈಗ ಮಗ ಮಿಲಿಂದ್ ಚೊಚ್ಚಲ ಸಿನಿಮಾಕ್ಕೆ ಅವರೇ ಬಂಡವಾಳ ಹಾಕಿದ್ದಾರೆ. ಈ ವಾರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೋಹನ್ ದಾಸ್ ಪೈ ಹಾಗೂ ಪುತ್ರ ಧೀರಜ್ ಈ ಚಿತ್ರ ವಿತರಣೆ ಮಾಡುತ್ತಿದ್ದಾರೆ.
ಮಿಲಿಂದ್, ಎಂಜಿನಿಯರಿಂಗ್ ಮುಗಿಸಿ ಜರ್ಮನಿ ದೇಶಕ್ಕೆ ಹೊರಡಲು ಸಜ್ಜಾಗಿದ್ದವರು. ಆದರೆ, ನಿರ್ದೇಶಕ ಶೃಂಗೇರಿ ಸುರೇಶ್ ಅವರ ಕಥೆ ಕೇಳಿ ಅವರ ಆತ್ಮವಿಶ್ವಾಸಕ್ಕೆ ಮಣಿದು, ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡರು. ಆದರೆ, ಅಂದು ಡಿ.ಮಂಜುನಾಥ್ ಒಂದು ಕಂಡೀಶನ್ ಹಾಕಿದ್ದರಂತೆ. ಈ ಚಿತ್ರದಲ್ಲಿ ಅನಂತ್ ನಾಗ್ ನಟಿಸಿದ್ರೆ ಮಾತ್ರ ಚಿತ್ರಕ್ಕೆ ಹಣ ಹೂಡುವುದು ಎಂದಿದ್ದರಂತೆ. ಶೃಂಗೇರಿ ಸುರೇಶ್ ಅವರ ಹಳೆ ಗೆಳೆತನದಿಂದ ಅನಂತ್ ನಾಗ್ ಸಹ ಒಪ್ಪಿದ್ದಾರೆ. ಈಗ ಚಿತ್ರ ರೆಡಿ ಸಹ ಆಗಿ, 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಭಾಗ್ಯ ಕಾಣುತ್ತಿದೆ.
ಈ ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿ. ರಘು, ಅಂಜಯ್, ಸಚಿನ್, ಕಾರ್ತಿಕ್ ಯುವ ರಂಗಭೂಮಿ ಕಲಾವಿದರನ್ನು ಈ ಸಿನಿಮಾ ಮೂಲಕ ನಿರ್ದೇಶಕರ ಪರಿಚಯ ಮಾಡುತ್ತಿದ್ದಾರೆ.ಮಂಜು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.