ಟೈಗರ್ ಪ್ರಭಾಕರ್ ಹೆಸರನ್ನು ಕಾಪಾಡಿಕೊಂಡು ಬರುತ್ತಿರುವ ಅವರ ಪುತ್ರ ವಿನೋದ್ ಪ್ರಭಾಕರ್ ಈಗ ಸ್ಯಾಂಡಲ್ವುಡ್ನ ಕಾಯಂ ‘ಟೈಗರ್’ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಯುತ್ತಾರೆ.
‘ಟೈಸನ್’ ಚಿತ್ರದ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ಶಕೆ ಆರಂಭಿಸಿದ ವಿನೋದ್ ಪ್ರಭಾಕರ್ಗೆ ಒಳ್ಳೆಯ ಅವಕಾಶಗಳು ಹುಡುಕಿ ಬರುತ್ತಿವೆ. ಈ ವರ್ಷ ವಿನೋದ್ ಪ್ರಭಾಕರ್ ಅಭಿನಯದ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕೆಲವು ದಿನಗಳ ಹಿಂದೆ ನಟ ದರ್ಶನ್ ‘ರಗಡ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದರು. ನಿನ್ನೆ ಸಿನಿಮಾದ ಆಡಿಯೋ ಬಿಡುಗೆಯಾಗಿದೆ. ಈ ಸಿನಿಮಾಗಾಗಿ ವಿನೋದ್ ದೇಹವನ್ನು ದಂಡಿಸಿ 8 ಪ್ಯಾಕ್ ಗಳಿಸಿದ್ದರು. ಈ ಸಿನಿಮಾವನ್ನು ಜಯಣ್ಣ ಫಿಲಮ್ಸ್ ಹಂಚಿಕೆ ಮಾಡುತ್ತಿದೆ.
ಆಡಿಯೋ ಬಿಡುಗಡೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ವಿನೋದ್, ಮುಂದಿನ ಸಿನಿಮಾ ‘ಫೈಟರ್’ ಚಿತ್ರೀಕರಣ ಸಂಪೂರ್ಣ ಆಗುವ ಮುನ್ನವೇ ಡಿಜಿಟಲ್ ಹಕ್ಕು ಮಾರಾಟ ಆಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇದುವರೆಗೂ ನನ್ನ ಸಿನಿಮಾಗಳಿಗೆ ಇಂತಹ ಮಾರುಕಟ್ಟೆ ಸಿಕ್ಕಿರಲಿಲ್ಲ. ಈಗ ಇಂತಹ ಮಾರ್ಕೆಟ್ ಪ್ರೋತ್ಸಾಹ ದೊರೆತಿರುವುದರಿಂದ ಮುಂದಿನ ಚಿತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಈ ವರ್ಷದಲ್ಲಿ ಬರುವ ಇವರ ಮತ್ತೊಂದು ಸಿನಿಮಾ ‘ಶ್ಯಾಡೊ’ ಶೂಟಿಂಗ್ ಕೂಡಾ ಭರದಿಂದ ಸಾಗುತ್ತಿದೆ. ಅಪ್ಪ ಬದುಕಿದ್ದರೆ ನನ್ನ ಬೆಳವಣಿಗೆ ನೋಡಿ ಸಂತೋಷ ಪಡುತ್ತಿದ್ದರು. ಅವರು ಮಾಡಿದ ಹೆಸರು ಹಾಗೂ ಆಸ್ತಿಯನ್ನು ಕಾಪಾಡಿಕೊಂಡು ಬರುವಂತೆ ನನಗೆ ಚಿತ್ರರಂಗದಲ್ಲಿ ಮನ್ನಣೆ ಸಿಕ್ಕಿದೆ ಎಂದು ವಿನೋದ್ ಪ್ರಭಾಕರ್ ಖುಷಿಪಟ್ಟರು.