ಸ್ಯಾಂಡಲ್ವುಡ್ ಹಿರಿಯ ನಟಿ ವಿನಯಾ ಪ್ರಸಾದ್ ಆಗಿಂದಾಗ್ಗೆ ಒಂದಿಲ್ಲೊಂದು ಸೃಜನಾತ್ಮಕ ಯೋಚನೆಗಳನ್ನು ಮಾಡುತ್ತಾರೆ. ಇದೀಗ ಕೊರೊನಾ ಭೀತಿಯಿಂದ ದೇಶ ತತ್ತರಿಸಿದ್ದು, ಇದ್ರಿಂದ ಪಾರಾಗಲು ಮೋದಿಯವರಿಗೆ ಒಂದು ವಿಶೇಷ ಐಡಿಯಾ ಕೊಡಲು ಸಿದ್ಧರಾಗಿದ್ದಾರೆ.
ಹೌದು, ವಿನಯಾ ಪ್ರಸಾದ್ ಮಾಡಿರುವ ಐಡಿಯಾ ಸ್ವಿಸ್ ಬ್ಯಾಂಕ್ನಲ್ಲಿರುವ ಭಾರತೀಯರ ಕಪ್ಪು ಹಣವನ್ನು ವಾಪಸ್ ದೇಶಕ್ಕೆ ತರುವುದು. ಈ ಬಗ್ಗೆ ಮೋದಿಯವರಿಗೆ ಪತ್ರ ಬರೆಯುವ ಯೋಚನೆ ಮಾಡಿದ್ದಾರಂತೆ.
ಸ್ವಿಸ್ ಬ್ಯಾಂಕ್ ಹಣವನ್ನು ತರುವುದು ಸುಲಭದ ಮಾತಲ್ಲ ಅಂತ ಗೊತ್ತಿದೆ. ಅದಕ್ಕೆ ರಾಜಕೀಯ, ಆರ್ಥಿಕ, ಸಾಮಾಜಿಕ, ಕಾನೂನಾತ್ಮಕ ಹಾಗೂ ಇನ್ನಿತರ ಅಡ್ಡಿ ಆತಂಕಗಳು ಬರಬಹುದು. ಆದ್ರೆ ಈ ಸಂಕಷ್ಟದ ಪರಿಸ್ಥಿತಿ ಬಿಟ್ಟರೆ ಇನ್ಯಾವಾಗ ಆ ಹಣವನ್ನು ನಮ್ಮ ದೇಶಕ್ಕೆ ತರುವುದು ಅನ್ನುತ್ತಾರೆ ವಿನಯಾ ಪ್ರಸಾದ್.
ಆದ್ರೆ ವಿನಯಾ ಪ್ರಸಾದ್ ಈ ಯೋಚನೆಯಲ್ಲಿ ಸಾಕಷ್ಟು ತಂತ್ರಗಳಿವೆಯಂತೆ. ಆ ಕಪ್ಪು ಹಣದಲ್ಲಿ ಶೇ 30ರಷ್ಟನ್ನು ಯಾರ ಹೆಸರಲ್ಲಿ ಇದೆಯೋ ಅವರಿಗೆ ನೀಡುವುದು. ಉಳಿದ 70ರಷ್ಟು ಹಣವನ್ನು ದೇಶಕ್ಕೆ ಉಪಯೋಗಿಸಿಕೊಳ್ಳುವುದು ಎಂದು ಹೇಳಿದ್ದಾರೆ.
ಹಾಗೆ ಆಗಬೇಕು ಎಂಬುದು ವಿನಯಾ ವಿನಂತಿ. ಆದರೆ ಆ ಹಣವನ್ನು ದೇಶದ ಮೂಲೆ ಮೂಲೆಯಲ್ಲಿ ಇರುವ ಬಡವರ ಹೆಸರಿನಲ್ಲಿ ಡೆಪಾಸಿಟ್ ಇಟ್ಟು ಎರಡು ಹೊತ್ತಿನ ಊಟಕ್ಕೆ ಕಷ್ಟ ಬರದ ಹಾಗೆ ನೋಡಿಕೊಳ್ಳಬೇಕು. ಇಂತಹ ಯೋಜನೆಗಳಿಗೆ ಅಡ್ಡಿ ಆತಂಕಗಳು ಇದ್ದದ್ದೇ. ಆದ್ರೆ ಈ ಕೊರೊನಾ ವೈರಸ್ ವಿಶ್ವಮಟ್ಟದಲ್ಲಿ ಅಟ್ಟಹಾಸ ಮೆರೆದಿರುವಾಗ ನಮ್ಮ ಭಾರತೀಯರನ್ನು ಕಾಪಾಡಿಕೊಳ್ಳುವುದರಲ್ಲಿ ಇದು ಒಂದು ಚಿಂತನೆ ಅಂತಾರೆ ವಿನಯಾ ಪ್ರಸಾದ್.