ಯುವ ನಿರ್ದೇಶಕ ರಘು ವರ್ಮಾ ತಮ್ಮ ಮೂರನೇ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇಂದು ಕನಕಪುರ ರಸ್ತೆ ಬಳಿ ಇರುವ ತ್ರಿಮೂರ್ತಿ ದೇವಸ್ಥಾನದ ಬಳಿ ‘ವಿಧಿಬರಹ’ ಚಿತ್ರದ ಮುಹೂರ್ತ ನಡೆದಿದೆ.
ರಘು ವರ್ಮಾ ಮೂಲತಃ ಕನಕಪುರದವರು. ಇವರು ನಿರ್ದೇಶಕರುಗಳಾದ ಕುಮಾರ್, ಆರ್.ಚಂದ್ರು, ಎಂ.ಡಿ.ಶ್ರೀಧರ್ ಮತ್ತು ಪ್ರೀತಂ ಗುಬ್ಬಿ ಬಳಿ ಸಹಾಯಕರಾಗಿ ಅನುಭವ ಪಡೆದು ಈಗಾಗಲೇ ದೌಲತ್ ಹಾಗೂ ತ್ಯಾಗಮಾಯಿ ಸಿನಿಮಾಗಳನ್ನು ಪೂರ್ತಿಗೊಳಿಸಿದ್ದಾರೆ. ಅವೆರಡು ಸಿನಿಮಾಗಳು ಬಿಡುಗಡೆಯಾಗಿಲ್ಲ. ಆಗಲೇ ಇವರ ಮೂರನೇ ಸಿನಿಮಾ ‘ವಿಧಿಬರಹ’ವು ದೀಪ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಶೀರ್ಷಿಕೆ ಕೆಳಗೆ ‘ಯಾರ್ಯಾರ ಹಣೆಲಿ ಏನೇನ್ ಬರೆದಿದ್ಯೋ... ಎಂದು ಹೇಳಲಾಗಿದೆ.
ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ವಿಧಿ ಅನ್ನೋದು ಇದ್ದೇ ಇರುತ್ತದೆ. ಅದು ಒಂದು ಕುಟುಂಬದಲ್ಲಿ, ಪ್ರೇಮಿಸಿದವರ ಬಾಳಿನಲ್ಲಿ, ಸ್ನೇಹಿತರಲ್ಲಿ ಹೇಗೆ ಆಟ ಆಡುತ್ತದೆ ಎಂಬುದು ಈ ಸಿನಿಮಾದ ಕಥಾ ಹಂದರ ಅನ್ನುತ್ತಾರೆ ನಿರ್ದೇಶಕ ರಘು ವರ್ಮಾ. ಶಾಲಾ ದಿನಗಳಿಂದ ಇವರಿಗೆ ಕಥೆ, ಕವನ ಬರೆಯುವುದು ಹುಚ್ಚು.
‘ವಿಧಿಬರಹ’ ಚಿತ್ರಕ್ಕೆ ಹಿರಿಯ ನಟರಾದ ಶೋಭರಾಜ್, ರಾಜೇಶ್ ನಟರಂಗ, ಲಯ ಕೋಕಿಲಾ, ಟೆನ್ನಿಸ್ ಕೃಷ್ಣ, ಮೋಹನ್ ಜುನೇಜ, ಪದ್ಮಜ ಅಲ್ಲದೆ ಬಲರಾಮ್, ಮೀನಾಕ್ಷಿ, ಜಸಿಕ, ಸುಧಾ, ಬಿಂದು, ಶಂಕರ್, ಮಂಜುನಾಥ್, ಜಯಶ್ರೀ ಬಣ್ಣ ಹಚ್ಚಿದ್ದಾರೆ.
ಚಿತ್ರದಲ್ಲಿ ಲಯ ಕೋಕಿಲ (ಸಾಧು ಕೋಕಿಲ ಸಹೋದರ) ಸಂಗೀತ, ಎಸ್.ಎಲ್.ವಿ.ರವಿ ಅವರ ಛಾಯಾಗ್ರಹಣವಿದೆ.