ಮುಂಬೈ: ಮಹಾಮಾರಿ ಕೊರೊನಾ ವೈರಸ್ಗೆ ಇದೀಗ ಮತ್ತೋರ್ವ ನಟ ಬಲಿಯಾಗಿದ್ದು, ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟನೆ ಮಾಡಿದ್ದ ಹಿರಿಯ ನಟ ಕಿಶೋರ್ ನಂದ್ಲಾಸ್ಕರ್ ಕೊನೆಯುಸಿರೆಳೆದಿದ್ದಾರೆ.
ಕೋವಿಡ್ ವೈರಸ್ಗೊಳಗಾಗಿ ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 81 ವರ್ಷದ ನಟ ನಿನ್ನೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅವರು ಬಾಲಿವುಡ್ ನಟ ಗೋವಿಂದ್ ಅವರೊಂದಿಗೆ 'ಜಿಸ್ ದೇಸ್ ಮೈ ಗಂಗಾ ರೆಹ್ತಾ ಹೈನಾ', ಸಂಜಯ್ ದತ್ ಅವರೊಂದಿಗೆ 'ವಾಸ್ತವ್', ಅಜಯ್ ದೇವಗನ್ ಅವರೊಂದಿಗೆ 'ಸಿಂಗಮ್' ಹಾಗೂ ರಣವೀರ್ ಸಿಂಗ್ ಅವರ 'ಸಿಂಬಾ' ಚಿತ್ರದಲ್ಲಿ ನಟನೆ ಮಾಡಿದ್ದಾರೆ. 1982ರಲ್ಲಿ ಮರಾಠಿ ಚಿತ್ರದಲ್ಲಿ ನಟನೆ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇವರ ನಿಧನಕ್ಕೆ ಬಾಲಿವುಡ್ ನಟ ಗೋವಿಂದ್ ಸೇರಿದಂತೆ ಅನೇಕರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಮಹಾಮಾರಿ ಆರ್ಭಟ ಜೋರಾಗಿದ್ದು, ನಿತ್ಯ ನೂರಾರು ಜನರು ಸೋಂಕಿಗೊಳಗಾಗಿ ಸಾವನ್ನಪ್ಪುತ್ತಿದ್ದಾರೆ.