ಕನ್ನಡದ ಬಗ್ಗೆ, ಕನ್ನಡಿಗರಿಗೆ ಕರ್ನಾಟಕದಲ್ಲಿ ಕೆಲಸದಲ್ಲಿ ಆದ್ಯತೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಹಳ ವರ್ಷಗಳಿಂದ ಹೋರಾಟಗಳು ನಡೆಯುತ್ತಲೇ ಇದೆ. ಇದೀಗ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಮೀಸಲು ಎಂಬ ಕೂಗು ಕೇಳಿ ಬರುತ್ತಿದೆ. ಅದರಲ್ಲೂ ಆಂಧ್ರಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ಸ್ಥಳೀಯರಿಗೆ ಸರ್ಕಾರಿ ಕೆಲಸ ಮೀಸಲಾದ ನಂತರ ಕರ್ನಾಟದಲ್ಲಿ ಕೂಡಾ ಇದರ ಬಗ್ಗೆ ಮತ್ತಷ್ಟು ಚರ್ಚೆ ಹೆಚ್ಚಾಗುತ್ತಿದೆ. ಈ ವಿಚಾರವಾಗಿ ನಟ, ನಿರ್ದೇಶಕ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಮಾತನಾಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಕೆಲಸ ಸಿಗದ ಮೇಲೆ ಮತ್ತೆ ನಾವೆಲ್ಲಿ ಹೋಗಬೇಕು..? ನಾನು ಈ ರಾಜ್ಯದಲ್ಲಿ ಹುಟ್ಟಿರುವುದರಿಂದ ನನಗೆ ಕೆಲಸದಲ್ಲಿ ಆದ್ಯತೆ ಕೊಡಿ ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ಇತರ ರಾಜ್ಯಗಳಲ್ಲಿ ಆಯಾ ರಾಜ್ಯದವರಿಗೆ ಹೇಗೆ ಕೆಲಸದಲ್ಲಿ ಮೀಸಲು ನೀಡಿದ್ದಾರೋ ನಮ್ಮ ರಾಜ್ಯದಲ್ಲಿ ಕೂಡಾ ಕನ್ನಡಿಗರಿಗೆ ಕೆಲಸದ ವಿಚಾರದಲ್ಲಿ ಆದ್ಯತೆ ನೀಡಬೇಕು ಎಂದು ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.