ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಅಭಿಮಾನಿಗಳು ರಿಯಲ್ ಸ್ಟಾರ್ ಉಪ್ಪಿಗೆ ಗಿಡಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ನೆಚ್ಚಿನ ನಟನಿಗೆ ವಿಶ್ ಮಾಡಿ ಸಂಭ್ರಮಿಸಿದರು. ಅಲ್ಲದೆ ಉಪೇಂದ್ರ ಬೆಳಗ್ಗೆಯಿಂದಲೇ ಅವರ ನಿವಾಸದ ಬಳಿ ಬಂದಿದ್ದ ಅಭಿಮಾನಿಗಳ ಜೊತೆ ಫೋಟೋಗೆ ಫೋಸ್ ಕೊಟ್ಟು ಸಂಭ್ರಮದಿಂದಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಭಿಮಾನಿಗಳು ತಂದಿದ್ದ 51 ಕೆಜಿ ಕೇಕನ್ನು ಕುಟುಂಬದೊಂದಿಗೆ ಕಟ್ ಮಾಡಿದರು.
ಉಪೇಂದ್ರ ಅಭಿಮಾನಿಗಳು ನಾನಾ ಬಗೆಯ ಹೂಗಳಿಂದ ಮೆಚ್ಚಿನ ನಟನಿಗೆ ಪುಷ್ಪ ಅಭಿಷೇಕ ಮಾಡಿ ಹೂವಿನಿಂದಲೇ ಉಪ್ಪಿಗೆ ಜಳಕ ಮಾಡಿಸಿದರು. ಅಲ್ಲದೆ ದೂರದ ಊರಿನಿಂದ ಬಂದಿದ್ದ ಇಬ್ಬರು ಅಂಗವಿಕಲ ಅಭಿಮಾನಿಗಳನ್ನು ತುಂಬಾ ಆತ್ಮೀಯವಾಗಿ ಮಾತನಾಡಿಸಿದ ಉಪ್ಪಿ ಅವರು ಇದ್ದ ಜಾಗಕ್ಕೆ ಆಗಮಿಸಿ ಅವರಿಂದ ಪ್ರೀತಿಯ ಕಾಣಿಕೆಗಳನ್ನು ಸ್ವೀಕರಿಸಿ, ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಇದೇ ವೇಳೆ ವಿಶೇಷ ಚೇತನ ಅಭಿಮಾನಿ ನೆಚ್ಚಿನ ನಟನಿಗೆ ಸಿಹಿ ಮುತ್ತು ನೀಡಿ ಸುಮಾರು 15 ದಿನಗಳಿಂದ ವೇಸ್ಟ್ ಪೇಪರ್ಗಳಲ್ಲೇ ಮಾಡಿದ ಒಂದು ನವಿಲು ಆಕೃತಿಯ ಗಿಫ್ಟ್ ನೀಡಿ ಸಂತೋಷಪಟ್ಟರು.
ಅಭಿಮಾನಿಗಳು ನೀಡಿದ ಗಿಡಗಳನ್ನು ರಾಜ್ಯದ ಮೂಲೆ ಮೂಲೆಗೂ ಹಂಚಿ ಕೆಲವೊಂದನ್ನು ತಮ್ಮ ತೋಟದಲ್ಲಿ ನೆಡುವುದಾಗಿ ಉಪೇಂದ್ರ ತಿಳಿಸಿದರು. ದೂರದ ಊರಿನಿಂದ ಬಂದಿದ್ದ ಸಾವಿರಾರು ಅಭಿಮಾನಿಗಳಿಗೆ ಉಪೇಂದ್ರ ತಮ್ಮ ನಿವಾಸದ ಬಳಿ ಊಟ, ತಿಂಡಿ ವ್ಯವಸ್ಥೆ ಮಾಡಿಸಿದ್ದರು. ಇದಲ್ಲದೆ ಉಪ್ಪಿ ತಮ್ಮ ಅಭಿಮಾನಿಗಳ ಜೊತೆ ತೆಗೆಸಿದ ಫೋಟೋಗಳನ್ನು ಅವರಿಗೆ ತಲುಪಿಸುವ ಸಲುವಾಗಿ ಎಲ್ಲಾ ರೀತಿ ವ್ಯವಸ್ಥೆಯನ್ನು ಮಾಡಿಸಿದ್ದು ವಿಶೇಷವಾಗಿತ್ತು.