ಕುಂದಾಪುರದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿರಿಸಿಕೊಂಡು ತಯಾರಾದ ಭ್ರಮೆ ಸಿನಿಮಾದ ಆಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ. ನವೆಂಬರ್ 1 ರಂದು ಈ ಚಿತ್ರ ನಮ್ಮ ಫ್ಲಿಕ್ಸ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ.
14 ದಿನಗಳಲ್ಲಿ 99 ರೂಪಾಯಿ ಮುಖಬೆಲೆಯ 10 ಸಾವಿರ ಟಿಕೆಟ್ ಮಾರಾಟವಾಗಿದೆ. ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಲಕ್ಕಿ ಡ್ರಾ ವಿಜೇತರ ಆಯ್ಕೆ ಮಾಡಲಾಯ್ತು. ಇದು ಮೊದಲ ಲಕ್ಕಿ ಡ್ರಾ ಆಗಿದ್ದು ವಿಜೇತರಿಗೆ ಬೈಕ್ ನೀಡಲಾಗಿದೆ. ಮುಂದಿನ ಡ್ರಾದಲ್ಲಿ ಬುಲೈಟ್ ಬೈಕ್ ಹಾಗೂ ಕಾರು ಕೂಡಾ ಇರಲಿದೆ. ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಮೊದಲ ಲಕ್ಕಿ ಡ್ರಾ ವಿಜೇತರನ್ನು ಆಯ್ಕೆ ಮಾಡಿದ್ದು ರಾಜರಾಜೇಶ್ವರಿ ನಗರದ ವ್ಯಕ್ತಿಯೊಬ್ಬರು ಬೈಕ್ ವಿಜೇತರಾಗಿದ್ದಾರೆ. ಎರಡನೇ ಲಕ್ಕಿ ಡ್ರಾ ಶೀಘ್ರದಲ್ಲೇ ನಡೆಯಲಿದೆ.
'ಭ್ರಮೆ' ಚಿತ್ರದಲ್ಲಿ ಹಿರಿಯ ನಿರ್ದೇಶಕ ತಿಪಟೂರು ರಘು ಪುತ್ರ ನವೀನ್ ರಘು ನಾಯಕನಾಗಿ ನಟಿಸಿದ್ದಾರೆ. ಇವರಿಗೆ ಯೆಶನ ಹಾಗೂ ಅಂಜನ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದು ಸಂಗೀತ ನಿರ್ದೇಶಿಸುತ್ತಿದ್ದಾರೆ.