ದಕ್ಷಿಣ ಕನ್ನಡ: ಕರಾವಳಿ ಭಾಗದ ಪ್ರಮುಖ ಆಕರ್ಷಣೆ ಹಾಗೂ ಸಂಪ್ರದಾಯಗಳಾದ ಯಕ್ಷಗಾನ, ದೈವಾರಾಧನೆ ಬಳಿಕ ಇದೀಗ ಇನ್ನೊಂದು ಆಚರಣೆ ಚಿತ್ರದ ಮೂಲಕ ತೆರೆಗೆ ಬರಲಿದೆ.
ಕರಾವಳಿಯಲ್ಲಿ ಹೆಚ್ಚಿನ ಭಾಗದಲ್ಲಿ ಆಚರಣೆಯಲ್ಲಿರುವ ಪ್ರೇತಗಳ ಮದುವೆಯನ್ನೇ ಮುಖ್ಯ ಕಥೆಯನ್ನಾಗಿ ಬಳಸಿಕೊಂಡು ಈ ಚಿತ್ರ ನಿರ್ಮಿಸಲಾಗಿದ್ದು, ಚಿತ್ರ ಮಾರ್ಚ್ 26ರಂದು ರಾಜ್ಯದೆಲ್ಲೆಡೆ ತೆರೆ ಕಾಣಲಿದೆ.
'ಇಂಗ್ಲಿಷ್' ಎನ್ನುವ ಟೈಟಲ್ನಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಕನ್ನಡದ ಮೇರು ನಟ ಅನಂತ್ ನಾಗ್ ಪ್ರಥಮ ಬಾರಿಗೆ ತುಳು ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮದುವೆಯಾಗದೆ ಆಕಸ್ಮಿಕವಾಗಿ ಮರಣವನ್ನಪ್ಪಿದ ಯುವಕರಿಗೆ ಮದುವೆಯ ಕಾರ್ಯಕ್ರಮ ಮಾಡುವ ಮೂಲಕ ಆತನ ಆಸೆಯನ್ನು ಪೂರೈಸುವ ಕ್ರಿಯೆಗೆ ಪ್ರೇತಗಳ ಮದುವೆ ಎನ್ನುತ್ತಾರೆ. ಈ ಕಥೆಯನ್ನು 'ಇಂಗ್ಲಿಷ್' ಚಿತ್ರದಲ್ಲಿ ಅತ್ಯಂತ ಸುಂದರವಾಗಿ ಚಿತ್ರಿಸಲಾಗಿದ್ದು, ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಕಥೆಯಲ್ಲಿ ಸಾಕಷ್ಟು ಕಾಮಿಡಿ ಸೀನ್ಗಳನ್ನೂ ಸೇರಿಸಿಕೊಳ್ಳಲಾಗಿದೆ.
ಎಕ್ಕಸಕ, ಪಿಲಿಬೈಲು ಯಮುನಕ್ಕ, ಅಮ್ಮೆರ್ ಪೊಲೀಸ್ ಮೊದಲಾದ ಸಾಲು ಸಾಲು ತುಳು ಹಿಟ್ ಚಿತ್ರಗಳನ್ನು ನೀಡಿರುವಂತಹ ನಿರ್ದೇಶಕ ಸೂರಜ್ ಶೆಟ್ಟಿ ಈ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 22, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮುಂತಾದ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಿದ ಹರೀಶ್ ಶೇರಿಗಾರಿ ಮತ್ತು ಶರ್ಮಿಲಾ ಶೇರಿಗಾರಿ ಈ ಚಿತ್ರ ನಿರ್ಮಿಸಿದ್ದು, ದಿಯಾ ಖ್ಯಾತಿಯ ನಟ ಪ್ರಥ್ವಿ ಅಂಬರ್ ಮತ್ತು ನವ್ಯ ಪೂಜಾರಿ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
ತುಳು ಚಿತ್ರರಂಗದ ದೈತ್ಯ ಪ್ರತಿಭೆಗಳಾದ ಮಜಾ ಟಾಕೀಸ್ ಖ್ಯಾತಿಯ ನವೀನ್. ಡಿ. ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್ ಮೊದಲಾದ ಹಾಸ್ಯ ಕಲಾವಿದರು ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರ ಪ್ರೇಮಿಗಳಿಗೆ ಭರಪೂರ ಹಾಸ್ಯವನ್ನು ಚಿತ್ರದಲ್ಲಿ ಬಡಿಸಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ನೀಡಿದ್ದಾರೆ. ಕನ್ನಡದ ಮೇರು ನಟ ಅನಂತ್ ನಾಗ್ ಇದೇ ಮೊದಲ ಬಾರಿಗೆ ಇದೇ ತುಳು ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ.
ಈ ಚಿತ್ರ ಮಾರ್ಚ್ 26ರಂದು ದಕ್ಷಿಣಕನ್ನಡ, ಉಡುಪಿ, ಶಿವಮೊಗ್ಗ, ಮೈಸೂರು, ಬೆಂಗಳೂರು ಹೀಗೆ 25 ಚಿತ್ರಮಂದಿರಗಳಲ್ಲಿ ಏಕ ಕಾಲಕ್ಕೆ ಬಿಡುಗಡೆಗೊಳ್ಳಲಿದ್ದು, ಫುಲ್ ಪ್ಯಾಮಿಲಿ ಎಂಟರ್ಟೈನರ್ ಚಿತ್ರ ಇದಾಗಿದೆ.