ಮಂಗಳೂರು: ಕೊರೊನಾ ವೈರಸ್ ಎಲ್ಲಾ ಉದ್ಯಮಗಳಂತೆ ಸಿನಿಮಾರಂಗಕ್ಕೂ ಹೊಡೆತ ನೀಡಿದೆ. ಈ ಕೊರೊನಾ ಬಗ್ಗೆಯೇ ಸಿನಿಮಾ ಮಾಡಲು ಕೆಲವು ನಿರ್ದೇಶಕ, ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಆಶ್ಚರ್ಯ ಎಂದರೆ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಈಗಾಗಲೇ ಕೊರೊನಾ ಹೆಸರಿನ ಸಿನಿಮಾ ತಯಾರಿಸಿ ಟ್ರೇಲರ್ ಕೂಡಾ ಬಿಡುಗಡೆ ಮಾಡಿದ್ದಾರೆ.
ಇದೀಗ ತುಳು ಭಾಷೆಯಲ್ಲಿ ಕೂಡಾ ಕೊರೊನಾ ಸಂಬಂಧ ಸಿನಿಮಾ ತಯಾರಾಗಲು ಹೊರಟಿದೆ. 'ಜೀಟಿಗೆ' ಎಂಬ ಹೆಸರಿನಲ್ಲಿ ಈ ಚಿತ್ರ ನಿರ್ಮಾಣಕ್ಕೆ ಎಲ್ಲಾ ತಯಾರಿ ನಡೆದಿದ್ದು ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಿದ ಕೂಡಲೇ ಸಿನಿಮಾ ಕೆಲಸ ಆರಂಭವಾಗಲಿದೆ. ಶಶಿರಾಜ್ ಕಾವೂರು ಎಂಬುವವರು ಲಾಕ್ಡೌನ್ ವೇಳೆ ಮನೆಯಲ್ಲೇ ಕುಳಿತು ಸ್ಕ್ರೀನ್ಪ್ಲೇ ಜೊತೆಗೆ ಸಾಹಿತ್ಯ ಕೂಡಾ ಬರೆದಿದ್ದಾರೆ. ಈಗಾಗಲೇ ಕಲಾವಿದರ ಆಯ್ಕೆ ಕೂಡಾ ನಡೆದಿದೆ.
ಇನ್ನು ಈ ಚಿತ್ರವನ್ನು ಸಂತೋಷ್ ಮಾಡ ಎಂಬುವವರು ನಿರ್ದೇಶಿಸಲಿದ್ದಾರೆ. ಇವರು ಈಗಾಗಲೇ 'ಲಕ್ಕಿಬಾಬು' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂತೋಷ್ ಸದ್ಯಕ್ಕೆ ಕೇರಳದಲ್ಲಿ ಇದ್ದು ಇ-ಮೇಲ್ ಮೂಲಕ ಚಿತ್ರಕಥೆಯನ್ನು ಅಂತಿಮಗೊಳಿಸಿದ್ದಾರೆ.
ತುಳುವಿನ ಖ್ಯಾತ ಹಾಸ್ಯ ಕಲಾವಿದ ನವೀನ್ ಡಿ. ಪಡೀಲ್ ಸೇರಿದಂತೆ ಇನ್ನಿತರ ಕಲಾವಿದರು ಚಿತ್ರದಲ್ಲಿ ನಟಿಸಲಿದ್ದಾರೆ. ಇದೊಂದು ಕಮರ್ಷಿಯಲ್ ಸಿನಿಮಾವಾಗಿರದೆ ಕಲಾತ್ಮಕ ಸಿನಿಮಾವಾಗಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ಕೊರೊನಾ ಲಾಕ್ಡೌನ್ ನಡುವೆ ಕೊರೊನಾಗೆ ಸಂಬಂಧಿಸಿದ ಚಿತ್ರ ನಿರ್ಮಾಣಕ್ಕೆ ತುಳು ಚಿತ್ರರಂಗ ತಯಾರಾಗಿರುವುದು ನಿಜಕ್ಕೂ ಗ್ರೇಟ್.