ಕೇಂದ್ರ ಸರ್ಕಾರ 2017 ರಲ್ಲಿ ಹೊರ ತಂದಿರುವ ‘ತ್ರಿವಳಿ ತಲಾಕ್’ ಕಾಯ್ದೆ ಬಗ್ಗೆ ಕನ್ನಡದಲ್ಲಿ ಹಿರಿಯ ನಿರ್ದೇಶಕ ವೈದ್ಯನಾಥನ್ , ತಮ್ಮ ಸುಚೇತನ ಎಂಟರ್ಪ್ರೈಸಸ್ ಸಂಸ್ಥೆ ಅಡಿಯಲ್ಲಿ ‘ತಲಾಕ್ ತಲಾಕ್ ತಲಾಕ್’ ಎಂಬ ಕನ್ನಡ ಸಿನಿಮಾವನ್ನು ತಯಾರಿಸಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಕೂಡಾ ಈ ಚಿತ್ರಕ್ಕೆ ಯು/ಎ ಅರ್ಹತಾ ಪತ್ರ ನೀಡಿದೆ.
ಅನುಭವಿ ನಿರ್ದೇಶಕ ವೈದ್ಯನಾಥನ್ ಸುಮಾರು 20 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ದೇವರಾಜ್ ಅಭಿನಯದ 'ದಂಡನಾಯಕ' ಸಿನಿಮಾ ನಂತರ ಇವರು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅನೇ ಸಿನಿಮಾಗಳಿಗೆ ಕಥೆ ಹಾಗೂ ಚಿತ್ರಕಥೆ ಕೂಡಾ ಬರೆದಿದ್ದಾರೆ. ಈ ಚಿತ್ರಕ್ಕೆ ವೈದ್ಯನಾಥನ್ ಅವರೇ ನಿರ್ದೇಶಕ ಕೂಡಾ ಆಗಿದ್ದು ಪತ್ನಿ ,ನಿವೃತ್ತ ಶಿಕ್ಷಕಿ ಸುಭಾಷಿಣಿ ಕೂಡಾ ಪತಿಯ ಸಿನಿಮಾ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ‘ತಲಾಕ್ ತಲಾಕ್ ತಲಾಕ್’ ಚಿತ್ರದಲ್ಲಿ ವೈದ್ಯನಾಥನ್ ಮಕ್ಕಳಾದ ಸುಚೇತನ್ ಸ್ವರೂಪ್ ವೈದ್ಯ ಮತ್ತು ಶಮಂತ್ ವೈದ್ಯ ನಟಿಸಿದ್ದಾರೆ. ಚಿತ್ರದಲ್ಲಿ ರಿಷಿ ತಂಗಿ ಹಾಗೂ ಖ್ಯಾತ ಆರ್ಜೆ ನೇತ್ರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಿರಿಯ ನಟ ಶ್ರೀನಿವಾಸಮೂರ್ತಿ, ವೀಣಾ ಸುಂದರ್, ರವಿ ಭಟ್, ಇಂತಿಯಾಜ್ ಹಾಗೂ ಇತರರು ನಟಿಸಿದ್ದಾರೆ.
ಚಿತ್ರವನ್ನು ಸುಮಾರು 20 ದಿನಗಳ ಕಾಲ ಆಗುಂಬೆ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ಅಶೋಕ್ ಕಶ್ಯಪ್ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತ ನೀಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್ ಸಂಕಲನ ಈ ಚಿತ್ರಕ್ಕಿದೆ. ಮೇಕಪ್ ರಾಮಕೃಷ್ಣ ಅವರ ತಾಂತ್ರಿಕ ಸ್ಪರ್ಶ ಕೂಡಾ ಚಿತ್ರಕ್ಕಿದೆ. ಮುಸ್ಲಿಂ ಕುಟುಂಬದ ನಾಯಕ ಪುಟ್ಟ ಮನಸ್ಥಾಪದಿಂದ ಒಲ್ಲದ ಮನಸ್ಸಿನಿಂದ ಪತ್ನಿಗೆ ತಲಾಕ್ ನೀಡುತ್ತಾನೆ. ಮುಸ್ಲಿಂ ಸಂಪ್ರದಾಯದ ಪ್ರಕಾರ ವಿಚ್ಛೇದನ ಪಡೆದ ದಂಪತಿಗಳು ಮತ್ತೆ ಒಂದಾಗಲು ಸಾಧ್ಯವಿಲ್ಲ. ಆದ್ದರಿಂದ ತಲಾಕ್ ನಂತರ ನಾಯಕ, ನಾಯಕಿ ಅನುಭವಿಸುವ ಕಷ್ಟಗಳನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಈ ಚಿತ್ರಕ್ಕೆ ಉತ್ತರ ಪ್ರದೇಶದ ನೂರ್ ಜೆಹಾರ್ ರಚಿಸಿದ ಕಾದಂಬರಿ ಮೂಲಕಥೆಯಾಗಿದೆ. ಅಬ್ದುಲ್ ರೆಹಮಾನ್ ಪಾಶಾ ಇದನ್ನು ಕನ್ನಡದಲ್ಲಿ ಅನುವಾದಿಸಿದ್ದಾರೆ. ನಂತರ ವೈದ್ಯನಾಥನ್ ಹಾಗೂ ಅಬ್ದುಲ್ ರೆಹಮಾನ್ ಇಬ್ಬರೂ ಸೇರಿ ಚಿತ್ರಕಥೆ ರಚಿಸಿದ್ದಾರೆ. ಮಧುಕರ್ ಬೆಳವಾಡಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.