ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಇತ್ತೀಚೆಗೆ ಹೊಸಬರ ತಂಡ ಭಾರೀ ಸದ್ದು ಮಾಡುತ್ತಿದೆ. ಲಾಕ್ ಡೌನ್ ವೇಳೆ ಎಷ್ಟೊ ಯುವಪ್ರತಿಭೆಗಳು ತಮ್ಮ ಪರಿಕಲ್ಪನೆ ಹಾಗೂ ಚಿಂತನೆಗಳನ್ನು ಕಿರುಚಿತ್ರದ ರೂಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಇದೀಗ ಮತ್ತೊಂದು ಹೊಸ ತಂಡ ತ್ರಿಕೋನ ಪ್ರೇಮಕಥೆಯನ್ನು ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದೆ. ಈ ಚಿತ್ರಕ್ಕೆ 'ನವಾಬ' ಎಂದು ಹೆಸರಿಡಲಾಗಿದೆ. 'ನಾವು ಇಷ್ಟ ಪಡುವವರಿಗಿಂತ ನಮ್ಮನ್ನು ಇಷ್ಟಪಡುವರ ಪ್ರೀತಿ ಬಹಳ ದೊಡ್ಡದು' ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಪ್ರೀತಿಯಲ್ಲಿರುವ ಒಬ್ಬ ಯುವಕನ ಜೀವನದಲ್ಲಿ ಏನೆಲ್ಲಾ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ನಕ್ಷತ್ರ ಆನಂದ್ ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಚಿತ್ರದಲ್ಲಿ ನಕ್ಷತ್ರ ಆನಂದ್ ಜೊತೆಗೆ ಮಹಾದೇವ ಹಾಗೂ ಶರವಣ ಎನ್ನುವವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕ್ಯಾಮರಾ ಯೂನಿಟ್, ಸಂಕಲನ, ಡಬ್ಬಿಂಗ್, ರೀ ರೆಕಾರ್ಡಿಂಗ್ನಲ್ಲಿ ಪರಿಣಿತಿ ಹೊಂದಿರುವ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಈ ಹೊಸಬರ ತಂಡಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಗೀತ ರಚನೆ ಜೊತೆಗೆ ಇದುವರೆಗೂ ಸುಮಾರು 15 ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.
ಈ ಚಿತ್ರದ ಮೂಲಕ ವಿವೇಕ್ ಸ್ಯಾಂಡಲ್ವುಡ್ಗೆ ಪರಿಚಯವಾಗುತ್ತಿದ್ದಾರೆ. ಇವರೊಂದಿಗೆ ಅಣ್ಣೇಶ್, ಮೋನಿಷ ಎನ್. ರಾಜ್, ಕಾವ್ಯ, ಪವಿತ್ರ ನೀಲಕಂಠ ಹಾಗೂ ಇತರರು ತಾರಾಗಣದಲ್ಲಿದ್ದಾರೆ. ನೂತನ್ ಪ್ರೊಡಕ್ಷನ್ಸ್ ಹೌಸ್ ಬ್ಯಾನರ್ ಅಡಿಯಲ್ಲಿ ಪಾಲಾಕ್ಷ ಬಿ.ಎನ್. ಬಿದರಕೋಟೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸೂಚಿತ್ ಎಸ್.ಕೆ. ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ.