ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ನಡೆದ 55ನೇ ಬೆಂಗಳೂರು ಗಣೇಶೋತ್ಸವ ನಿಮಿತ್ತ ರಾಕಿಂಗ್ ಸ್ಟಾರ್ ಯಶ್ ಜತೆಗೆ ಆಚರಿಸಿದ ವಿನೂತನ ಕಾರ್ಯಕ್ರಮ 'ಯಶಸ್ ವಿನಾಯಕ' ಕಾರ್ಯಕ್ರಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಾಳೆ ಸಂಜೆ 7.30ಗೆ ಮರು ಪ್ರಸಾರವಾಗಲಿದೆ.
ಮಾತಿನ ಮಲ್ಲ ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಅದ್ದೂರಿಯಾಗಿ ಮೂಡಿ ಬಂದಿದ್ದ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಯಶ್. ಅಮೋಘವಾದ ಹಾಡಿಗೆ ನೃತ್ಯ ಮಾಡುತ್ತ, ಪ್ರೇಕ್ಷಕರನ್ನು ರಂಜಿಸುತ್ತಿದ್ದ ಯಶ್ ಕಾರ್ಯಕ್ರಮದ ಪೂರ್ತಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸಿದ್ದರು.
ಗಣೇಶೋತ್ಸವದಲ್ಲಿ ತಮಗೂ ಮತ್ತು ಗಣೇಶನ ನಡುವೆ ಇರುವ ಸಂಬಂಧದ ವಿಚಾರವನ್ನು ಹೇಳಿರುವ ಯಶ್ ವೇದಿಕೆ ಮೇಲೆ ತಮ್ಮ ಆರ್ಕೇಸ್ಟ್ರಾ ದಿನಗಳ ಸವಿ ನೆನಪುಗಳನ್ನು ಹಂಚಿಕೊಂಡಿದ್ದರು. ಎಲ್ಲದಕ್ಕಿಂತಲೂ ಮುಖ್ಯವಾಗಿ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ವೀಕ್ಷಕರ ಮುಂದೆ ಪ್ರಶ್ನೆ ಕೇಳಿದ್ದು ಸೊಗಸಾಗಿತ್ತು.
ಗಣೇಶೋತ್ಸವದ ನೆಪದಲ್ಲಿ ವೀಕ್ಷಕರನ್ನು ಮನರಂಜಿಸಿದ ಯಶಸ್ ವಿನಾಯಕ ಕಾರ್ಯಕ್ರಮವು 2017ರ ಸೆಪ್ಟೆಂಬರ್ 17 ರಂದು ವಾಹಿನಿಯಲ್ಲಿ ಪ್ರಸಾರವಾಗಿತ್ತು.
ನಾಳೆ ಸಂಜೆ ಈ ಕಾರ್ಯಕ್ರಮ ಮತ್ತೆ ಮರು ಪ್ರಸಾರ ಆಗಲಿದೆ. ಲಾಕ್ ಡೌನ್ ನೆಪದಲ್ಲಿ ಮತ್ತೆ ಒಂದೂವರೆ ವರುಷ ಹಳೆಯ ಕಾರ್ಯಕ್ರಮಗಳನ್ನ ನೋಡಿ ಸಂತಸ ಪಡುವ ಅವಕಾಶ ವೀಕ್ಷಕರಿಗೆ ಒದಗಿ ಬಂದಿದೆ.