ಪ್ರೇಕ್ಷಕರನ್ನು ಸಿನಿಮಾ ಥಿಯೇಟರ್ಗಳತ್ತ ಸೆಳೆಯಲು ನಿರ್ದೇಶಕ ನೂರಾರು ಪ್ರಯತ್ನ ಮಾಡುತ್ತಾನೆ. ಈ ಮುನ್ನ ಬಿಳಿ ಹಂದಿಮರಿಯನ್ನು ಪ್ರಮುಖ ಕಥಾವಸ್ತುವನ್ನಾಗಿಟ್ಟುಕೊಂಡು 'ಅಧುಗೊ' ಸಿನಿಮಾ ಮಾಡಿದ್ದ ತೆಲುಗು ನಿರ್ದೇಶಕ ರವಿಬಾಬು ಇದೀಗ ಮತ್ತೆ 'ಆ' ಅಕ್ಷರದಿಂದ ತಯಾರಾಗುವ ಸಿನಿಮಾ ಮಾಡುತ್ತಿದ್ದಾರೆ.
ಯುವತಿ ತಲೆ ಇರುವ ಕುಕ್ಕರೊಂದನ್ನು ಸ್ಟೌ ಮೇಲೆ ಬಿಸಿ ಮಾಡಲು ಇಡಲಾಗಿರುವ ಈ ಫೋಟೋ ರವಿಬಾಬು ಅವರ ಹೊಸ ಸಿನಿಮಾ ಪೋಸ್ಟರ್. ತಮ್ಮ ಹೊಸ ಸಿನಿಮಾಗೆ ರವಿಬಾಬು 'ಆವಿರಿ' ಎಂದು ಹೆಸರಿಟ್ಟಿದ್ದಾರೆ. ನಟನಾಗಿ ಟಾಲಿವುಡ್ಗೆ ಕಾಲಿಟ್ಟ ರವಿಬಾಬು ನಂತರ ವಿಭಿನ್ನ ಸಿನಿಮಾ ನಿರ್ದೇಶಕ ಎಂದೇ ಹೆಸರಾದರು. 'ಫ್ಲೈಯಿಂಗ್ ಫ್ರಾಗ್ಸ್' ಎಂಬ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಇತರ ನಿರ್ಮಾಣ ಸಂಸ್ಥೆಗಳೊಂದಿಗೆ ಸೇರಿ ಸಿನಿಮಾಳನ್ನು ನಿರ್ದೇಶಿಸಿ ಯಶಸ್ಸು ಕೂಡಾ ಕಂಡಿದ್ದಾರೆ. 'ಅಲ್ಲರಿ' ಸಿನಿಮಾದಿಂದ ಆರಂಭವಾದ ಅವರ ಸಿನಿಮಾ ನಿರ್ದೇಶನ ಜರ್ನಿ 'ಆವಿರಿ'ವರೆಗೆ ಬಂದು ನಿಂತಿದೆ. ಅಮ್ಮಾಯಿಲು ಅಬ್ಬಾಯಿಲು, ಅನಸೂಯ, ಅಮರಾವತಿ, ಅಯಿತೆ, ಅವುನು ಸೇರಿ ಇವರ ಬಹುತೇಕ ಸಿನಿಮಾಗಳು ಅ, ಆ ಅಕ್ಷರಗಳಿಂದಲೇ ಆರಂಭವಾಗಿವೆ. 'ಆವಿರಿ' ಹಾರರ್ ಥ್ರಿಲ್ಲರ್ ಸಿನಿಮಾ ದಿಲ್ರಾಜು ನಿರ್ಮಾಣದಲ್ಲಿ ಮೂಡಿಬರುತ್ತಿದೆ.