ನವರಸನಾಯಕ ಜಗ್ಗೇಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ.
ಎಂದಿನಂತೆ ಈ ವರ್ಷ ಕೂಡಾ ಜಗ್ಗೇಶ್ ಮಂತ್ರಾಲಯಕ್ಕೆ ತೆರಳಿ ಗುರುರಾಘವೇಂದ್ರರ ದರ್ಶನ ಪಡೆದಿದ್ದಾರೆ. ಟ್ವಿಟ್ಟರ್ನಲ್ಲಿ ತಮಗೆ ಶುಭ ಕೋರಿದ ಅಭಿಮಾನಿಗಳಿಗೆ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ. 1963 ಮಾರ್ಚ್ 17 ರಂದು ತುಮಕೂರಿನ ಜಡೆ ಮಾಯಸಂದ್ರ ಎಂಬ ಪುಟ್ಟ ಹಳ್ಳಿಯಲ್ಲಿ ಶಿವಲಿಂಗಪ್ಪ ಹಾಗೂ ನಂಜಮ್ಮ ದಂಪತಿಗೆ ಮೊದಲ ಪುತ್ರನಾಗಿ ಜನಿಸಿದ ಜಗ್ಗೇಶ್ ಮೊದಲ ಹೆಸರು ಈಶ್ವರ್ ಗೌಡ. 1982 ರಲ್ಲಿ 'ಇಬ್ಬನಿ ಕರಗಿತು' ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಜಗ್ಗೇಶ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು. ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಜಗ್ಗೇಶ್ ಸ್ವಂತ ಪರಿಶ್ರಮದಿಂದ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.
ಜಗ್ಗೇಶ್ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಸಿನಿಮಾದ ಟೀಸರನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಮೇಶ್ ಇಂದಿರ ನಿರ್ದೇಶನದ ಈ ಸಿನಿಮಾವನ್ನು ಶ್ರುತಿ ನಾಯ್ಡು ನಿರ್ಮಿಸಿದ್ದಾರೆ. ಜಗ್ಗೇಶ್ ಅವರೊಂದಿಗೆ ಸುಧಾರಾಣಿ, ಮಧುಬಾಲ, ದತ್ತಣ್ಣ, ಪ್ರಮೋದ್ ಪಂಜು, ಹಿತ ಚಂದ್ರಶೇಖರ್, ಭಾರ್ಗವಿ ನಾರಾಯಣ್ ಹಾಗೂ ಇನ್ನಿತರರು 'ಪ್ರೀಮಿಯರ್ ಪದ್ಮಿನಿ' ಸಿನಿಮಾದಲ್ಲಿ ನಟಿಸಿದ್ದಾರೆ.