ಕೆಜಿಎಫ್ 2 ಚಿತ್ರತಂಡದಿಂದ ಅದೆಷ್ಟೋ ದಿನಗಳಿಂದ ಒಂದೇ ಒಂದು ಅಪ್ಡೇಟ್ ಸಹ ಇರಲಿಲ್ಲ. ಕೊನೆಗೆ ಚಿತ್ರದ ಮತ್ತು ಯಶ್ ಅವರ ಅಭಿಮಾನಿಗಳೇ ಏನಾದರೂ ಅಪ್ಡೇಟ್ ಕೊಡಿ ಎಂದು ಚಿತ್ರತಂಡವನ್ನು ಒತ್ತಾಯ ಮಾಡುತ್ತಿದ್ದರು. ಜನರ ಒತ್ತಾಯಕ್ಕೆ ಮಣಿದು ಚಿತ್ರತಂಡ ಸಂಜಯ್ ದತ್ ಅವರ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ, ಪೋಸ್ಟರ್ ನೋಡಿದ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿಕೊಂಡಿದ್ದಾರೆ.
ಸಂಜಯ್ ದತ್ ಹುಟ್ಟುಹಬ್ಬಕ್ಕೆ ಪೋಸ್ಟರ್ ಅಥವಾ ಟೀಸರ್ ಆದರೂ ಬಿಡುಗಡೆ ಮಾಡಿ ಎಂದು ಚಿತ್ರತಂಡದವರನ್ನು ಒತ್ತಾಯಿಸಿದ್ದೇ ಅಭಿಮಾನಿಗಳು. ಅದಕ್ಕೆ ಸರಿಯಾಗಿ ಚಿತ್ರತಂಡದವರು ಸಂಜಯ್ ದತ್ ಹುಟ್ಟುಹಬ್ಬಕ್ಕೆ ಒಂದು ಪೋಸ್ಟರ್ ಬಿಡುಗಡೆ ಮಾಡಿದರು. ಆದರೆ, ಆ ಪೋಸ್ಟರ್ನಲ್ಲಿ ಯಾವುದೇ ವಿಶೇಷತೆ ಇರಲಿಲ್ಲ. ಸಾಮಾನ್ಯವಾಗಿ, ಕೆಜಿಎಫ್ 2 ಚಿತ್ರದ ಅಪ್ಡೇಟ್ಗಳು ಸಾಕಷ್ಟು ಟ್ರೆಂಡ್ ಆಗುತ್ತವೆ. ಪೋಸ್ಟ್ಗಳಿಗೆ ಸಾಕಷ್ಟು ಲೈಕ್ಗಳು ಬೀಳುವ ಜತೆಗೆ, ರೀಟ್ವೀಟ್ ಸಹ ಆಗುತ್ತವೆ. ಆದರೆ ಈ ಪೋಸ್ಟರ್ ನಿರಾಸೆ ಮೂಡಿಸಿದೆ.
ಇನ್ನು ಈ ಬಾರಿ ಸಂಜಯ್ ದತ್ ಅವರ ಅಧೀರ ಪಾತ್ರವನ್ನು ಪರಿಚಯಿಸುವ ಟೀಸರ್ ಬಿಡುಗಡೆಯಾಗುವ ಸಾಧ್ಯತೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಟೀಸರ್ ಬಿಡುಗಡೆಯಾಗಲಿಲ್ಲ. ಅದಕ್ಕೆ ಕಾರಣವೂ ಇದೆ. ಮೂಲಗಳ ಪ್ರಕಾರ, ಚಿತ್ರದ ಬಹುತೇಕ ಪಾತ್ರಗಳ ಡಬ್ಬಿಂಗ್ ಆಗಿದ್ದರೂ, ಸಂಜಯ್ ದತ್ ಅವರ ಪಾತ್ರದ ಡಬ್ಬಿಂಗ್ ಆಗಿಲ್ಲ. ಸಂಜಯ್ ದತ್ ಅವರ ಧ್ವನಿ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ.
ಅದನ್ನು ಮ್ಯಾಚ್ ಮಾಡುವಂತಹ ಧ್ವನಿ ಸಿಗುತ್ತಿಲ್ಲ. ಅವರಿಂದಲೇ ಡಬ್ ಮಾಡಿಸೋಣವೆಂದರೆ, ಅವರಿಂದ ಕನ್ನಡ ಮಾತಾಡಿಸುವುದು ಕಷ್ಟ. ಬೇಕಾದರೆ, ಹಿಂದಿ ವರ್ಷನ್ಗೆ ದತ್ ಅವರಿಂದ ಡಬ್ ಮಾಡಿಸಬಹುದು. ಮಿಕ್ಕಂತೆ, ಬೇರೆ ಭಾಷೆಗಳಲ್ಲಿ ಸಂಜಯ್ ದತ್ ಅವರ ಧ್ವನಿ ಹೋಲುವ ಧ್ವನಿಯೊಂದರ ಹುಡುಕಾಟ ನಡೆದಿದ್ದು, ಎಷ್ಟು ಜನರಿಂದ ಆಡಿಷನ್ ಮಾಡಿಸಿದರೂ ಮ್ಯಾಚ್ ಆಗುತ್ತಿಲ್ಲವಂತೆ. ಆದ ಕಾರಣ, ಹುಟ್ಟುಹಬ್ಬಕ್ಕೆ ಸಂಜಯ್ ದತ್ ಅವರ ಟೀಸರ್ ಬಿಡುಗಡೆ ಮಾಡಬೇಕು ಎಂದುಕೊಂಡರೂ, ಚಿತ್ರತಂಡಕ್ಕೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.