ಪುತ್ತೂರು : ಮಾಜಿ ಭೂಗತ ದೊರೆ ಮುತ್ತಪ್ಪ ರೈ ಜೀವನದ ಕಥೆಗಳನ್ನು ಒಳಗೊಂಡ ಬಯೋ ಪಿಕ್ ‘ಎಂ ಆರ್” ಸಿನಿಮಾ ಸದ್ಯದಲ್ಲೇ ಸೆಟ್ ಏರಲಿದೆ. ಡೆಡ್ಲಿ ಸೋಮ ಸಿನಿಮಾ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಸಿನಿಮಾ ಚಿತ್ರಿಕರಣ ಆರಂಭಕ್ಕೆ ಪೂರ್ವಭಾವಿಯಾಗಿ ಸಿನಿಮಾದ ಯಶಸ್ಸಿಗಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ನೋಡಿ : ಅಮೂಲ್ಯರ ಸುಂದರ ಚಿತ್ರಗಳು
ಚಿತ್ರ ನಿರ್ಮಾಣದ ಬಳಿಕ ಶ್ರೀ ದೇವಾಲಯದಲ್ಲಿ ಮಹಾಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಸೇವೆ ಸಲ್ಲಿಸುವ ಸಂಕಲ್ಪವನ್ನು ಚಿತ್ರ ತಂಡ ಮಾಡಿದೆ. ನಿರ್ದೇಶಕ ರವಿ ಶ್ರೀವತ್ಸ, ನಾಯಕ ನಟ ದೀಕ್ಷಿತ್ ಹಾಗೂ ನಿರ್ಮಾಪಕ ಶೋಭಾ ರಾಜಣ್ಣ ಈ ಸಂಕಲ್ಪವನ್ನು ಕೈಗೊಂಡರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ನಿರ್ದೇಶಕ ರವಿ ಶ್ರೀವತ್ಸ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ಚಿತ್ರ ಕಥಾ ನಾಯಕ ಮುತ್ತಪ್ಪ ರೈ ಅವರ ಆರಾಧ್ಯ ದೈವವಾಗಿದ್ದರು. ಅವರ ಜೀವನದ ಸಕಲ ಯಶಸ್ಸಿನ ಹಿಂದೆ ಪುತ್ತೂರು ಮಹಾಲಿಂಗೇಶ್ವರನ ಪಾತ್ರ ಇದೆ ಎಂದು ನಂಬಿಕೊಂಡಿದ್ದರು. ಅದೇ ಹಿನ್ನೆಲೆಯಲ್ಲಿ ಚಿತ್ರ ತಂಡವೂ ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ ಶತರುದ್ರಾಭಿಷೇಕದ ಸಂಕಲ್ಪ ಮಾಡಿಕೊಂಡಿದೆ ಎಂದರು.
ಇದನ್ನೂ ಓದಿ : ಓದಿನ ಜೊತೆಗೆ ಆ್ಯಕ್ಟಿಂಗ್ ಕೂಡಾ ಬ್ಯಾಲೆನ್ಸ್ ಮಾಡುತ್ತಿರುವ 'ಆಕೃತಿ'ಯ ಭೈರವಿ
ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪುತ್ತೂರಿಗೆ ಅಗಮಿಸುವುದಾಗಿ ತಿಳಿಸಿದ ಅವರು, ಸಿನಿಮಾದಲ್ಲಿ ಬರುವ ಮುತ್ತಪ್ಪ ರೈ ಯವರ ಬಾಲ್ಯದ ಹಾಗೂ ಯೌವನದ ದಿನಗಳ ಕಥೆಗಳ ಚಿತ್ರೀಕರಣವನ್ನು ಪುತ್ತೂರು ಹಾಗೂ ಮಂಗಳೂರು ಭಾಗದಲ್ಲಿ ಚಿತ್ರೀಕರಿಸಲಾಗುತ್ತದೆ. ಚಿತ್ರವು ಮೂರು ಭಾಗಗಳಲ್ಲಿ ತೆರೆ ಕಾಣಲಿದೆ. ಚಿತ್ರದ ನಾಯಕ ನಟ ದೀಕ್ಷಿತ್ ಈ ಹಿಂದೆ ಡೆಡ್ಲಿ ಸೋಮ ಚಿತ್ರದಲ್ಲಿ ಬಾಲ ನಟನಾಗಿ ಪಾತ್ರ ನಿರ್ವಹಿಸಿದ್ದರು ಎಂದು ತಿಳಿಸಿದರು.
ಈ ಸಿನಿಮಾಕ್ಕಾಗಿ ಕಳೆದ ಹಲವು ದಿನಗಳಿಂದ ತಯಾರಿ ನಡೆಸುತ್ತಿದ್ದಾನೆ. ಮುತ್ತಪ್ಪ ರೈ ಅವರ ಹಳೇ ವಿಡಿಯೋ ಹಾಗೂ ಫೋಟೋಗಳನ್ನು ಗಮನಿಸಿ ಪಾತ್ರಕ್ಕೆ ಪೂರಕವಾಗುವ ಅಂಶಗಳನ್ನು ಬಳಸಿಕೊಳ್ಳಲಿದ್ದೇನೆ. ತಯಾರಿ ಮುಂದುವರೆದಿದೆ. ನಾಯಕ ನಟನಾಗಿ ಅವಕಾಶ ಸಿಕ್ಕ ಮೊದಲ ಸಿನಿಮಾದಲ್ಲೇ ಇಷ್ಟು ಅಗಾಧ ವ್ಯಕ್ತಿತ್ವದ ವ್ಯಕ್ತಿಯ ಪಾತ್ರ ನಿರ್ವಹಿಸಲು ಅವಕಾಶ ಸಿಕ್ಕಿದೆ. ದೇವರ ಆಶೀರ್ವಾದದಿಂದ ಇದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ನಾಯಕ ನಟ ದೀಕ್ಷಿತ್ ತಿಳಿಸಿದರು.