ಡಾಲಿ ಧನಂಜಯ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ರತ್ನನ್ ಪ್ರಪಂಚ' ಟೈಟಲ್ನಿಂದಲೇ ಗಮನ ಸೆಳೀತಿರೋ ಚಿತ್ರ. ಇದೀಗ ಈ ಸಿನಿಮಾ ತಂಡದಿಂದ ಮಾಹಿತಿಯೊಂದು ಹೊರಬಿದ್ದಿದ್ದು, ಚಿತ್ರದಲ್ಲಿ ಹಿರಿಯ ನಟಿ ತಾರಾ ಅನುರಾಧಾ ನಟಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿರೋ ತಾರಾ ಈಗ ಮತ್ತೊಂದು ಖಡಕ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಚಿತ್ರದಲ್ಲಿ ಉತ್ತರ ಕರ್ನಾಟಕದ ಮೂಲದ ಗಟ್ಟಿಗಿತ್ತಿ ಗೌಡತಿ ಪಾತ್ರದಲ್ಲಿ ತಾರ ನಟಿಸುತ್ತಿದ್ದಾರೆ.
ತಾರಾ ಅವರೇ ಹೇಳುವ ಪ್ರಕಾರ, ಕಥೆಯ ಒಂದೆಳೆ ಹೇಳುತ್ತಿದ್ದಂತೆ ಅವರಿಗೆ ಇಷ್ಟವಾಯಿತಂತೆ. ನಾನು ಈ ರೀತಿಯ ಪಾತ್ರವನ್ನು ಇಲ್ಲಿಯವರೆಗೂ ಮಾಡಿಲ್ಲ. ಖಡಕ್ ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡುವ ಹೆಣ್ಣುಮಗಳಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಹಿಳೆಯಾಗಿ ನನ್ನ ಪಾತ್ರ ಸಾಗಲಿದೆ. ನೆಗೆಟಿವ್ ಶೇಡ್ ಅಲ್ಲದ, ದೇವತೆಯಂತೆ ಬಿಂಬಿಸುವ ಪಾತ್ರ ಇದು. ಉತ್ತರ ಕರ್ನಾಟಕ ಭಾಷೆ ಕಲಿಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ.
ಇಡೀ ಸಿನಿಮಾದಲ್ಲಿ ತಾರಾ ಪಾತ್ರ ಮುಖ್ಯವಾಗಿರುವುದರಿಂದ ಬಹುಪಾಲು ಸಿನಿಮಾದಲ್ಲಿ ಅವರೂ ಕಾಣಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಸಂಭಾಷಣೆ ಒಪ್ಪಿಸಬೇಕಿರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಆ ಸೊಗಡನ್ನು ಉಚ್ಚರಿಸುವುದಕ್ಕೆ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.
ಈವರೆಗೂ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಪ್ರತಿ ಪಾತ್ರದಲ್ಲಿಯೂ ಕಲಿಯುವುದಕ್ಕೆ ಸಾಕಷ್ಟಿತ್ತು. ಈಗಲೂ ನನಗೆ ಕಲಿಯುವುದಕ್ಕೆ ಇಂಥ ಪಾತ್ರಗಳ ಮೂಲಕ ಅವಕಾಶ ಸಿಗುತ್ತಿದೆ. ಆ ರೀತಿಯ ಪಾತ್ರ ಹಿಡಿದು ಬರುವ ನಿರ್ದೇಶಕರಿಗೆ, ನೀವೇ ನಟಿಸಬೇಕು ಎನ್ನುವ ನಿರ್ಮಾಪಕರಿಗೆ ನನ್ನ ನಮನಗಳು ಎಂದಿದ್ದಾರೆ.
ಇನ್ನು ಲಾಕ್ಡೌನ್ ಮುಗಿಯುತ್ತಿದ್ದಂತೆ ಟಾಮ್ ಆ್ಯಂಡ್ ಜೆರ್ರಿ ಮತ್ತು ಬಡವ ರಾಸ್ಕಲ್ ಚಿತ್ರದ ಶೂಟಿಂಗ್ ಮುಗಿಸಿರುವ ತಾರಾ, ನವೆಂಬರ್ನಲ್ಲಿ ರತ್ನನ್ ಪ್ರಪಂಚ ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಚಿತ್ರಕ್ಕೆ ದಯವಿಟ್ಟು ಗಮನಿಸಿ ಸಿನಿಮಾ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನವಿದ್ದು, ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ರತ್ನನ್ ಪ್ರಪಂಚ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.