ಧ್ರುವ ಸರ್ಜಾ ಅಭಿನಯಿಸುತ್ತಿರುವ ಹೊಸ ಸಿನಿಮಾ 'ದುಬಾರಿ' ಮುಹೂರ್ತ ಇಂದು ಬೆಂಗಳೂರಿನ ನವರಂಗ್ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ನೆರವೇರಿದೆ. ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಈ ಸಿನಿಮಾ ಸರಳವಾಗಿ ಸೆಟ್ಟೇರಿದೆ.
ಧ್ರುವ ಸರ್ಜಾ ನಟಿಸಿರುವುದು 4 ಚಿತ್ರಗಳಲ್ಲಿ ಆದರೂ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ಡಮ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ 'ಪೊಗರು' ಬಿಡುಗಡೆಗೆ ಮುನ್ನವೇ ಧ್ರುವ 5ನೇ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಹಿರಿಯ ನಟಿ ತಾರಾ ಅನುರಾಧ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ಹಿರಿಯ ನಟ ದೊಡ್ಡಣ್ಣ, ನಿರ್ದೆಶಕ ಚೇತನ್ ಕುಮಾರ್, ನಟ ಧರ್ಮ, ಚಂದನ್ ಶೆಟ್ಟಿ ಸೇರಿದಂತೆ ಸ್ಯಾಂಡಲ್ವುಡ್ ಗಣ್ಯರು ಇಂದು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
'ದುಬಾರಿ' ಚಿತ್ರಕ್ಕೆ ನಂದಕಿಶೋರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಧ್ರುವ ಸರ್ಜಾ ಹಾಗೂ ನಂದಕಿಶೋರ್ ಕಾಂಬಿನೇಶನ್ನಲ್ಲಿ ತಯಾರಾಗುತ್ತಿರುವ ಎರಡನೇ ಸಿನಿಮಾ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತವಿದ್ದು, ಶೇಖರ್ ಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ಮೋಹನ್ ಬಿ.ಕೆರೆ ಕಲಾ ನಿರ್ದೇಶನ, ಪ್ರಶಾಂತ್ ರಾಜಪ್ಪ ಸಂಭಾಷಣೆ ಹಾಗೂ ಮರಳಿ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರವನ್ನು ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ಧಾರೆ.
ವಿಶೇಷ ಎಂದರೆ ಇಂದು ಮುಹೂರ್ತ ನೆರವೇರಿದ ಗಣಪತಿ ದೇವಸ್ಥಾನ ಧ್ರುವ ಸರ್ಜಾ ಪಾಲಿಗೆ ಲಕ್ಕಿ ಅಂತೆ. ಧ್ರುವ ಮೊದಲ ಸಿನಿಮಾ ಅದ್ದೂರಿಯಿಂದ ಹಿಡಿದು ಬಹದ್ದೂರ್, ಭರ್ಜರಿ, ಪೊಗರು ಸಿನಿಮಾಗಳ ಮುಹೂರ್ತ ಕೂಡಾ ಇದೇ ದೇವಸ್ಥಾನದಲ್ಲಿ ನೆರವೇರಿದೆ. ಈ ದೇವಸ್ಥಾನದಲ್ಲಿ ಮುಹೂರ್ತ ನಡೆದ ಎಲ್ಲಾ ಸಿನಿಮಾಗಳು ಸಕ್ಸಸ್ ಕಂಡಿವೆಯಂತೆ. ಈ ಕಾರಣಕ್ಕೆ ಹೊಸ ಸಿನಿಮಾ ಮುಹೂರ್ತ ಕೂಡಾ ಇದೇ ದೇವಸ್ಥಾನದಲ್ಲಿ ನೆರವೇರಿದೆ. ಧ್ರುವ ಸರ್ಜಾ ಇದನ್ನು ಬಲವಾಗಿ ನಂಬಿದ್ದಾರೆ.