ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆ ಹಾಸ್ಯನಟ ಯೋಗಿ ಬಾಬು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಕೆಲವೊಂದರ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಯೋಗಿ ಬಾಬು ಸದಾಶಿವನಗರದಲ್ಲಿರುವ ಪುನೀತ್ ರಾಜಕುಮಾರ್ ಮನೆಗೆ ಭೇಟಿ ನೀಡಿ ಅಪ್ಪು ಜೊತೆ ಕೆಲ ಸಮಯ ಮಾತುಕತೆ ನಡೆಸಿದ್ದಾರೆ.
ತಮಿಳು ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರಾದ ರಜನಿಕಾಂತ್, ವಿಜಯ್, ಸೂರ್ಯ ಸಿನಿಮಾಗಳಲ್ಲಿ ಯೋಗಿಬಾಬು ಇರಲೇಬೇಕು ಎಂಬ ಬ್ಯ್ರಾಂಡ್ ಕ್ರಿಯೇಟ್ ಮಾಡಿದ್ದಾರೆ. ನಯನತಾರ ಜೊತೆ 'ಕೋಲಮಾವು ಕೋಕಿಲ' ಚಿತ್ರದಲ್ಲಿ ಯೋಗಿ ಬಾಬು ನಾಯಕ ನಟನಾಗಿ ಮಿಂಚಿದ್ರು. ಈ ಸಿನಿಮಾ ಯೋಗಿ ಬಾಬುಗೆ ಸ್ಟಾರ್ ವ್ಯಾಲ್ಯೂ ತಂದು ಕೊಟ್ಟಿತ್ತು.
ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಯೋಗಿ ಬಾಬು, ಕಳೆದ 4-5 ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಉಳಿದುಕೊಂಡಿದ್ದಾರೆ. ಕೆಲಸದ ನಡುವೆ ಪುನೀತ್ ರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಪುನೀತ್ ರಾಜ್‍ಕುಮಾರ್ ಜೊತೆ ಯೋಗಿ ಬಾಬು ಸಿನಿಮಾ ವಿಚಾರವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪುನೀತ್ ರಾಜ್‍ಕುಮಾರ್ ನಿರ್ಮಾಣದ 'ಫ್ರೆಂಚ್ ಬಿರ್ಯಾನಿ' ಸಿನಿಮಾ ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದು ಈ ಸಿನಿಮಾದ ರೀಮೇಕ್ ರೈಟ್ಸ್ ಕೇಳಲು ಯೋಗಿಬಾಬು ಬಂದಿದ್ದರು ಎಂಬ ಸುದ್ದಿ ಕೂಡಾ ಹರಿದಾಡುತ್ತಿದೆ.
ಒಟ್ಟಾರೆ ತಮಿಳು ಹಾಗೂ ತೆಲುಗು ಚಿತ್ರರಂಗದ ಯಾವುದೇ ನಟರು ಬೆಂಗಳೂರಿಗೆ ಬಂದಾಗ ಡಾ. ರಾಜ್‍ಕುಮಾರ್ ಕುಟುಂಬವನ್ನು ತಪ್ಪದೆ ಭೇಟಿ ಮಾಡಿ ಬರುತ್ತಾರೆ. ನಟಸಾರ್ವಭೌಮನ ಕುಟುಂಬದ ಮೇಲೆ ಇತರ ಸಿನಿಮಾರಂಗದವರಿಗೆ ಯಾವ ರೀತಿ ಗೌರವ ಇದೆ ಎಂಬುದು ಇದರಿಂದ ತಿಳಿಯುತ್ತದೆ.