ಬೆಂಗಳೂರು : ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆ ತಮಿಳು ಖ್ಯಾತ ನಟ ಶಿವಕಾರ್ತಿಕೇಯನ್ ಇಂದು ಬೆಂಗಳೂರಿಗೆ ಆಗಮಿಸಿ ನಾಗವಾರದಲ್ಲಿರುವ ಶಿವಣ್ಣನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ನಂತರ ಪುನೀತ್ ಅವರ ಸದಾಶಿವನಗರದಲ್ಲಿರುವ ಮನೆಗೆ ಭೇಟಿ ನೀಡಿ ಪುನೀತ್ ಪತ್ನಿ ಅಶ್ವಿನಿಯವರಿಗೆ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲಿಂದ ನೇರವಾಗಿ ಕಂಠೀರವ ಸ್ಟುಡಿಯೊಗೆ ತೆರಳಿ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ನಮಗೆ ಪುನೀತ್ ಇಲ್ಲ ಅನ್ನೋದನ್ನ ಅಂದುಕೊಳ್ಳೋದಕ್ಕೆ ಸಹ ಸಾಧ್ಯವಾಗುತ್ತಿಲ್ಲ. ಪುನೀತ್ ಒಬ್ಬ ಅದ್ಭುತ ನಟರಾಗಿದ್ದರು. ಇಂದಿಗೂ ನಾವು ಶಾಕ್ನಲ್ಲಿಯೇ ಇದ್ದೇವೆ. ಅದರಿಂದ ಹೊರಗೆ ಬರಲು ಆಗುತ್ತಿಲ್ಲ. ಒಂದು ತಿಂಗಳ ಹಿಂದೆಯಷ್ಟೆ ನಾನು ಪುನೀತ್ ಜೊತೆ ಮಾತನಾಡಿದ್ದೆ. ಇಡೀ ಸಿನಿಮಾ ಇಂಡಸ್ಟ್ರಿಗೆ ಇದೊಂದು ದೊಡ್ಡ ಲಾಸ್ ಎಂದು ಹೇಳಿದರು.
ತುಂಬಾ ಒಳ್ಳೆಯ ಮನಸ್ಸು, ಎಲ್ಲರನ್ನ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಪುನೀತ್ ಅದ್ಭುತ ನಟ, ಅವರ ನಿಧನ ನೋವು ತಂದಿದೆ. ನನ್ನ 'ಡಾಕ್ಟರ್' ಸಿನಿಮಾ ನೋಡಿ ವಿಶ್ ಮಾಡಿದ್ದರು. ಅವಾರ್ಡ್ ಕಾರ್ಯಕ್ರಮದಲ್ಲಿ ನಾನು ಪುನೀತ್ ಹಾಗೂ ಶಿವಣ್ಣ ಸರ್ ಭೇಟಿಯಾಗಿದ್ದೆ.
ಮನೆಗೆ ಬಂದು ಭೇಟಿಯಾಗುವಂತೆ ಆಹ್ವಾನಿಸಿದ್ದರು. ಬೆಂಗಳೂರಿಗೆ ಬನ್ನಿ ಭೇಟಿಯಾಗಿ ಅಂದರು. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವೇ ಆಗಲಿಲ್ಲ. ಇಂದು ನಾನು ಭೇಟಿಯಾಗಲು ಬಂದೆ ಅವರೇ ಇಲ್ಲ ಎಂದರು.
ಯಾವತ್ತೂ ಅವರು ಮನದಲ್ಲಿ ಇರುತ್ತಾರೆ. ನನಗೆ ಇನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅಂಥದರಲ್ಲಿ ಅಭಿಮಾನಿಗಳು, ಕುಟುಂಬದವರು ಹೇಗೆ ನಂಬುತ್ತಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದರು.
ಓದಿ: ಅಪ್ಪುಗೆ ನಾಳೆ ಹಾಲು ತುಪ್ಪ ವಿಧಿವಿಧಾನ ಕಾರ್ಯ: ಪುನೀತ್ ಸಮಾಧಿ ಬಳಿ ಸಕಲ ಸಿದ್ಧತೆ