ಕನ್ನಡದ ಬಹಳಷ್ಟು ಸಿನಿಮಾಗಳು ಬೇರೆ ಭಾಷೆಗೆ ರೀಮೇಕ್ ಆಗಿವೆ. 'ಯುಟರ್ನ್' ನಂತರ ಇದೀಗ ಮತ್ತೊಂದು ಹಿಟ್ ಸಿನಿಮಾದ ರೀಮೇಕ್ ತೆಲುಗಿಗೆ ಮಾರಾಟವಾಗುತ್ತಿದ್ದು ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನ ಗೆದ್ದ ಲವ್ ಮಾಕ್ಟೇಲ್ ಸಿನಿಮಾ ಇದೀಗ ತೆಲುಗು ಭಾಷೆಗೆ ರೀಮೇಕ್ ಆಗುತ್ತಿದೆ. ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿ ನಟಿಸಿದ್ದರು. ಚಿತ್ರವನ್ನು ಕೃಷ್ಣ ಅವರೇ ಮೊದಲ ಬಾರಿ ನಿರ್ದೇಶಿಸಿದ್ದರು. ಚಿತ್ರದಲ್ಲಿ ಮಿಲನಾ ಹಾಗೂ ಕೃಷ್ಣ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿತ್ತು. ಸಿನಿಮಾ ಬಿಡುಗಡೆಯಾದ ನಂತರವಷ್ಟೇ ಇವರು ನಿಜ ಜೀವನದಲ್ಲಿ ಕೂಡಾ ಪ್ರೇಮಿಗಳು ಎಂಬ ವಿಚಾರ ರಿವೀಲ್ ಆಗಿತ್ತು.
ತೆಲುಗು ರೀಮೇಕ್ನಲ್ಲಿ ತಮನ್ನಾ ಹಾಗೂ ಸತ್ಯದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಗಶೇಖರ್ ಮೂವೀಸ್ ಬ್ಯಾನರ್ ಅಡಿ ಭಾವನಾ ರವಿ ಚಿತ್ರವನ್ನು ನಿರ್ಮಿಸುತ್ತಿದ್ದರೆ ನಾಗಶೇಖರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸೆಪ್ಟೆಂಬರ್ನಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದ್ದು ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಪುತ್ರ ಕಾಲಭೈರವ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ.
ಕನ್ನಡದಲ್ಲಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿದ ಸಿನಿಮಾ ತೆಲುಗಿನಲ್ಲಿ ಯಾವ ರೀತಿ ಮೋಡಿ ಮಾಡಲಿದೆ ಕಾದು ನೋಡಬೇಕು.