ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ, ಥ್ರಿಲ್ಲರ್ ಕಥಾವಸ್ತುಗಳನ್ನು ತೆರೆಯ ಮೇಲೆ ತರುವುದರಲ್ಲಿ ಖ್ಯಾತರಾದ ಸುನಿಲ್ ಕುಮಾರ್ ದೇಸಾಯಿ ಬಹಳ ವರ್ಷಗಳ ನಂತರ ಮತ್ತೆ 'ಉದ್ಘರ್ಷ' ಹಾಗೂ 'ರೇ' ಚಿತ್ರದ ಮೂಲಕ ನಿರ್ದೇಶನಕ್ಕೆ ಬಂದರು. ಆದರೆ ಈ ಎರಡೂ ಚಿತ್ರಗಳು ಅವರ ಕೈ ಹಿಡಿಯಲಿಲ್ಲ.
ಈ ಸೋಲು ಸುನಿಲ್ ಕುಮಾರ್ ದೇಸಾಯಿ ಅವರಿಗೆ ಸ್ವಲ್ಪ ಮಾನಸಿಕವಾಗಿ ಕೂಡಾ ನೋವು ನೀಡಿದೆ ಎನ್ನಬಹುದು. ತರ್ಕ, ಉತ್ಕರ್ಷ, ನಿಷ್ಕರ್ಷ, ಸಂಘರ್ಷ, ನಮ್ಮೂರ ಮಂದಾರ ಹೂವೆ, ಬೆಳದಿಂಗಳ ಬಾಲೆ, ಪ್ರತ್ಯರ್ಥ, ಸ್ಪರ್ಶ, ಪ್ರೇಮ ರಾಗ ಹಾಡು ಗೆಳತಿ, ಪರ್ವ, ಮರ್ಮ, ರಮ್ಯ ಚೈತ್ರ ಕಾಲ ಚಿತ್ರಗಳವರೆಗೆ ಸುನಿಲ್ ಕುಮಾರ್ ದೇಸಾಯಿ ಅವರ ಸಿನಿಮಾಗಳಿಗೆ ಬೇಡಿಕೆ ಇತ್ತು. ನಂತರ ಅವರು ಆರಂಭಿಸಿದ ಪ್ರಜ್ವಲ್ ದೇವರಾಜ್ ಸಿನಿಮಾ ಕೂಡಾ ಅರ್ಧಕ್ಕೆ ನಿಂತಿತು. ಕೆಲವು ವರ್ಷಗಳ ನಂತರ ‘ರೇ’ ಮತ್ತು ’ಉದ್ಘರ್ಷ’ ಅವರನ್ನು ಸೋಲಿನ ದವಡೆಗೆ ಸಿಲುಕಿಸಿತು.

ಎರಡು ಸಿನಿಮಾಗಳ ಸತತ ಸೋಲಿನಿಂದಾಗಿ ಈಗ ನನ್ನ ಬಳಿ ಯಾವ ನಿರ್ಮಾಪಕರು ಬರುತ್ತಿಲ್ಲ. ನನಗೆ ಈಗ 65 ವರ್ಷ. ಇನ್ನು ಐದು ವರ್ಷಗಳಲ್ಲಿ ದೊಡ್ಡ ಸಿನಿಮಾ ಮಾಡಿ ನಾನು ಕೂಡಾ ಆರ್ಥಿಕವಾಗಿ ಬಲವಾಗಬೇಕು. 70 ರ ನಂತರ ಕೆಲಸ ಮಾಡಲು ಶಕ್ತಿ ಇರುವುದಿಲ್ಲ ಎಂದು ಹೇಳಿಕೊಳ್ಳುವ ಸುನಿಲ್ ಕುಮಾರ್ ದೇಸಾಯಿ ಅವರ ಬಳಿ 4 ಕಥೆಗಳು ಇವೆಯಂತೆ. 50 ಲಕ್ಷದಿಂದ 1 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಿಸುವ ಕಥೆ, ಬಹು ಕೋಟಿ ನಿರ್ಮಾಣ ಮಾಡುವ ಕಥಾವಸ್ತು ಕೂಡಾ ಇದೆಯಂತೆ.
ತಮ್ಮ ಪರಿಸ್ಥಿತಿಯ ಬಗ್ಗೆ ನೋವು ಹೇಳಿಕೊಂಡಿರುವ ಸುನಿಲ್ ಕುಮಾರ್ ದೇಸಾಯಿ, ದೈನಂದಿನ ಬದುಕಿಗೆ ಆರ್ಥಿಕ ಶಕ್ತಿ ಇಲ್ಲ. ನನ್ನ ಬಳಿ ಯಾವ ನಿರ್ಮಾಪಕ ಕೂಡಾ ಬರುತ್ತಿಲ್ಲ ಎಂದು ಬೇಸರಗೊಂಡಿದ್ದಾರೆ. ಈಗ ಚಿಕ್ಕ ಬಜೆಟಿನ ಸಿನಿಮಾ ಮಾಡೋಣ ಅಂತ ಹೇಳಿದರೂ ಯಾರು ಮುಂದೆ ಬರುತ್ತಿಲ್ಲ ಎಂಬುದು ಅವರ ಕೊರಗು.
ಬನಶಂಕರಿಯಲ್ಲಿ ವಾಸವಿರುವ ಸುನಿಲ್ ಕುಮಾರ್ ದೇಸಾಯಿ ಅವರ ಹಿರಿಯ ಮಗಳು ಪಿ.ಇ.ಎಸ್ ಕಾಲೇಜಿನಲ್ಲಿ ಕ್ರಿಯೇಟಿವ್ ಆರ್ಟ್ಸ್ ವ್ಯಾಸಂಗ ಮಾಡುತ್ತಿದ್ದರೆ ಮಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಇತ್ತೀಚೆಗೆ ದೇಸಾಯಿ ಅವರ ಆಪ್ತ ಸ್ನೇಹಿತ ಅಜ್ಜಿಮನೆ ನಾಗೇಂದ್ರ ನಿಧನರಾಗಿದ್ದಕ್ಕೆ ಕೂಡಾ ಅವರು ಬಹಳ ನೊಂದಿದ್ದಾರೆ.