''ಅಂಬರೀಶ್ ಅವರ ಹೆಸರನ್ನು ನಾನ್ಯಾಕೆ ಬಳಸಬಾರದು...? ನನ್ನ ಹೆಸರಿನ ಜೊತೆಗೇ ಅವರ ಹೆಸರು ಇದೆ. ಅವರ ಹೆಸರೇ ನನಗೆ ಸ್ಫೂರ್ತಿ ಮತ್ತು ಧೈರ್ಯ. ಕೆಟ್ಟ ಕೆಲಸ ಮಾಡುವುದು ಅವರವರ ಕರ್ಮ. ಒಳ್ಳೆಯದು ಮಾಡುವುದು ನಮ್ಮ ಧರ್ಮ. ಮಾತನಾಡುವವರು ಮಾತನಾಡಲಿ, ಆದರೆ ನಮ್ಮ ಕೆಲಸ ಮಾತ್ರ ಮಾತಾಡಬೇಕು'' ಎಂದು ಸುಮಲತಾ ಅಂಬರೀಶ್ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಾಂಗ್ ನೀಡಿದ್ದಾರೆ.
ಇತ್ತೀಚೆಗೆ ಪ್ರತಾಪ್ ಸಿಂಹ ಸುಮಲತಾ ಅವರನ್ನು ಉದ್ದೇಶಿಸಿ ಮಾತನಾಡಿದ್ದ ಆಡಿಯೋವೊಂದು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಸುಮಲತಾ ಅವರು ಆಗಲೇ ಉತ್ತರ ಕೊಟ್ಟಿದ್ದರು. ಈಗ ಅವರು ಮಂಡ್ಯದ ಕಾರ್ಯಕ್ರಮದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಇನ್ನೊಮ್ಮೆ ಪ್ರತಾಪ್ ಸಿಂಹ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ''ಅವರು ಬೇಕಾದರೆ ಇದೇ ರೀತಿ ಮಾತನಾಡಿಕೊಂಡಿರಲಿ. ನಾವು ಕೆಲಸ ಮಾಡುವ ಮೂಲಕ ಮಾತು ಆಡಬೇಕು'' ಎಂದು ಸುಮಲತಾ ಹೇಳಿದ್ದಾರೆ.
ನವೆಂಬರ್ 24 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋ ಬಳಿ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ ಅಲ್ಲಿಂದ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿ ಗ್ರಾಮಕ್ಕೆ ತೆರಳಿ ಅಂಬರೀಶ್ ಅಭಿಮಾನಿಗಳು ನಿರ್ಮಿಸಿರುವ ಕಂಚಿನ ಪುತ್ಥಳಿ ಹಾಗೂ 'ಅಂಬಿ ಅಮರ' ಗುಡಿಯನ್ನು ಲೋಕಾರ್ಪಣೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್, ದರ್ಶನ್, ರಾಕ್‍ಲೈನ್ ವೆಂಕಟೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ದರ್ಶನ್, ಅಂಬರೀಶ್ ಅವರು ಜನರ ಪ್ರೀತಿ ಮತ್ತು ಅಭಿಮಾನದಲ್ಲಿ ಜೀವಂತವಾಗಿದ್ದಾರೆ. ಅವರ ಪುತ್ಥಳಿ ಅದ್ಭುತವಾಗಿದೆ. ಅವರೇ ಎದುರಿಗೆ ಇರುವ ರೀತಿ ಇದೆ' ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅಂಬರೀಶ್ ಅಭಿಮಾನಿಗಳು 80 ಯೂನಿಟ್ ರಕ್ತದಾನ ಮಾಡಿದರು.