ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ, ಕೆಲವು ದಿನಗಳ ಹಿಂದೆ ಸ್ನಾನದ ಮನೆಯಲ್ಲಿ, ಜಾರಿ ಬಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ. ಅರವತ್ತರ ದಶಕದ ನಾಯಕಿಯರಲ್ಲಿ ಒಬ್ಬರಾಗಿರುವ ಲೀಲಾವತಿ, ಆರೋಗ್ಯವನ್ನ ಇಂದು ಸ್ಟಾರ್ ನಟಿಯಾರದ ಸುಧಾರಾಣಿ, ಶೃತಿ ಮತ್ತು ಮಾಳವಿಕಾ ಅವಿನಾಶ್ ವಿಚಾರಿಸಿದ್ದಾರೆ.
ಅಷ್ಟೇ ಅಲ್ಲ ಗಂಟೆಗಳ ಕಾಲ ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಸುಧಾರಾಣಿ, ಶೃತಿ ಮತ್ತು ಮಾಳವಿಕ ಅವಿನಾಶ್ ಲೀಲಾವತಿ ಅವರ ಜೊತೆ ಕಾಲ ಕಳೆದಿದ್ದಾರೆ. ಹಾಗೇ ಲೀಲಾವತಿಯ ನಟನೆ ಬಗ್ಗೆ ಮಾತನಾಡುತ್ತಾ, ಲೀಲಾವತಿ ಜೊತೆ ಸಮಯ ಕಳೆದಿದ್ದಾರೆ. ಈ ಬಗ್ಗೆ ನಟಿ ಸುಧಾರಾಣಿ ಲೀಲಾವತಿ ಅವರ ಬಗ್ಗೆ ಕೆಲ ವಿಚಾರಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅವರು ವಾಸವಿರುವ ಊರಿನಲ್ಲಿ ಬಡಜನರಿಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ. ಹಸು ಕರುಗಳಿಗೆ ನೀರಿನ ಟ್ಯಾಂಕ್ ಕಟ್ಟಿಸಿ ಅವುಗಳಿಗೆ ಮೇವು ನೀಡಿದ್ದಾರೆ. ಎಷ್ಟೋ ಜನರಿಗೆ ಊಟ ನೀಡಿ ಸಹಾಯ ಮಾಡುತ್ತ ಇರುವ ಇವರನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎಂದು ಕರೆಯುವುದೋ ಅಥವಾ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದೆಲ್ಲವನ್ನು ಭೂಮಿ ತಾಯಿಯ ಹಾಗೆ ತನ್ನಲ್ಲಿಯೇ ಹೊತ್ತು, ತಾಳ್ಮೆಯಿಂದ ಎಲ್ಲವನ್ನು ಸಹಿಸಿ, ಲೀಲಾಜಾಲವಾಗಿ ನಿಭಾಯಿಸಿರುವ ಇವರನ್ನು ಭೂಮಿ ತಾಯಿಯ ಸ್ವರೂಪ ಎಂದು ಕರೆಯುವುದೋ ಎಂದು ನಟಿ ಸುಧಾರಾಣಿ ಹೇಳಿದ್ದಾರೆ.
ಇಂತಹ ವ್ಯಕ್ತಿತ್ವ ಹೊಂದಿರುವ ಲೀಲಾವತಿ ಅಮ್ಮನವರ ಜೊತೆ ಬಾಲನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ನನಗೆ ಸಿಕ್ಕಿತು. ನಾಯಕಿಯಾದ ಮೇಲೆಯೂ ಲೀಲಾವತಿ ಅಮ್ಮನವರ ಜೊತೆ ಸುಮಾರು ಸಿನಿಮಾಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಅದೃಷ್ಟ. ಇಲ್ಲಿರುವ ಎರಡು ಫೋಟೋಗಳಲ್ಲಿ ಮೊದಲನೆಯದು ನಾನು ಬಾಲನಟಿಯಾಗಿ ನಟಿಸಿದ ಮೊದಲ ಸಿನಿಮಾ ಕಿಲಾಡಿ ಕಿಟ್ಟು ಚಿತ್ರೀಕರಣದ ಸಮಯದ ಫೋಟೋ ಮತ್ತೊಂದು ಇಂದು ಲೀಲಾವತಿ ಅಮ್ಮನವರನ್ನು ಭೇಟಿ ಮಾಡಿದ ಸಂದರ್ಭದ ಫೋಟೋ ಎಂದು ಸುಧಾರಾಣಿ ಹೇಳಿದ್ದಾರೆ.
ಇನ್ನು ವರ್ಷಗಳು ಉರುಳಿವೆಯೇ ಹೊರತು ನಮ್ಮ ನಡುವೆ ಇರುವ ಬಾಂಧವ್ಯವಲ್ಲ ಎಂದು ಹೇಳುವ ಮೂಲಕ ಲೀಲಾವತಿ ಅವರ ಆರೋಗ್ಯ ವಿಚಾರಿಸಿಕೊಂಡು ಬಂದ ನಟಿ ಸುಧಾರಾಣಿ ಅವರು, ಹಿರಿಯ ನಟಿ ಲೀಲಾವತಿ ಮೇಲಿರುವ ಪ್ರೀತಿ, ಭಕ್ತಿ, ಕಾಳಜಿ, ಅಭಿಮಾನ ಹಾಗೂ ತಮ್ಮ ಭಾವನೆಯನ್ನ ಪದಗಳಲ್ಲಿ ಕಟ್ಟಿಕೊಟ್ಟಿದ್ದಾರೆ.