ಕಿಚ್ಚ ಸುದೀಪ್ @25 ಅದ್ದೂರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಹಿರಿಯ ನಟ ಶಿವರಾಮ್, ಸಮರ್ಥನಂ ಅಂಗವಿಕಲ ಸಂಸ್ಥೆಯ ಮುಖ್ಯಸ್ಥ ಜಿ ಕೆ ಮಹಾಂತೇಶ್, ಸಂಗೀತ ನಿರ್ದೇಶಕ ವಿ ಮನೋಹರ್, ಹಿರಿಯ ನಿರ್ಮಾಪಕ ಚಿನ್ನೇಗೌಡ, ಸಿರಿ ಮ್ಯೂಜಿಕ್ ಕಂಪನಿ ಮಾಲೀಕಾರದ ಸುರೇಶ್ ಚಿಕ್ಕಣ್ಣ ಲೋಗೋ ಅನಾವರಣ ಮಾಡಿದರು.
ಸುದೀಪ್ @25 ಕಾರ್ಯಕ್ರಮದ ಹೊಣೆ ಹೊತ್ತಿರುವ ಹಿರಿಯ ನಟ ಶಿವರಾಮ್ ಮಾತನಾಡಿ, ಸಮರ್ಥನಂ ಅಂಗವಿಕಲ ಸಂಸ್ಥೆಯೊಂದಿಗೆ, ಸುದೀಪ್ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಮಾಡಿಕೊಳ್ಳಲು ಒಪ್ಪಿಗೆ ಕೊಡುವ ಮೂಲಕ, ಸಮರ್ಥನಂ ಅಂಗವಿಕಲ ಸಂಸ್ಥೆ ಬೆಳವಣಿಗೆಗೆ ಕೈ ಜೋಡಿಸಿರೋದು ಹೆಮ್ಮೆಯ ವಿಷಯ.
ಸಮರ್ಥನಂ ಅಂಗವಿಕಲ ಸಂಸ್ಥೆಯ ಸಹಯೋಗದೊಂದಿಗೆ ಮೇ 16ರಂದು ನಾಯಂಡನಹಳ್ಳಿ ಹತ್ತಿರ ಬರುವ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ನಿಧಿ ಸಂಗ್ರಹ ಮೂಲಕ ಐದು ಸಾವಿರ ಜನರು ಸೇರುವ ಜಾಗದಲ್ಲಿ ಸುದೀಪ್ 25ನೇ ವರ್ಷದ ಬೆಳ್ಳಿ ಮಹೋತ್ಸವನ್ನ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ಸಂಗೀತ ಸಂಜೆ ಹಾಗೂ ಡ್ಯಾನ್ಸ್, ಕಾಮಿಡಿ ಕಾರ್ಯಕ್ರಮಗಳು ಸಹ ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಸಿನಿಮಾ ಸೆಲೆಬ್ರೆಟಿಗಳು ಕೂಡ ಭಾಗವಹಿಸಲಿದ್ದಾರೆ. ಕೊರೊನಾ ಇರುವ ಕಾರಣ ಸರ್ಕಾಕರದ ಮಾರ್ಗಸೂಚಿ ಪ್ರಕಾರ ಈ ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಲಾಗಿದೆಯಂತೆ.
ಸಂಗೀತ ನಿರ್ದೇಶಕ ವಿ ಮನೋಹರ್ ಹಾಗೂ ಹಿರಿಯ ನಿರ್ಮಾಪಕ ಚಿನ್ನೇಗೌಡ ಮಾತನಾಡಿ, ಸುದೀಪ್ ಅವರು ಸಮರ್ಥನಂ ಅಂಗವಿಕಲ ಟ್ರಸ್ಟ್ ಜೊತೆಗೆ ತನ್ನ 25ನೇ ವರ್ಷದ ಕಾರ್ಯಕ್ರಮ ಮಾಡಿಕೊಳ್ಳುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮರ್ಥನಂ ಅಂಗವಿಕಲ ಸಂಸ್ಥೆ ಮುಖ್ಯಸ್ಥ ಮಹಾಂತೇಶ್ ಮಾತನಾಡಿ, ಅಂದೇ ನಮ್ಮ ಸಂಸ್ಥೆಗೆ 24 ವರ್ಷ ತುಂಬುತ್ತಿದೆ. ಈ ಸಂಸ್ಥೆಯಡಿ ವಿಕಲ ಚೇತನರಿಗೆ, ವಿಶೇಷ ಶಾಲೆ, ಶಿಕ್ಷಣ, ಊಟ ವಸತಿ, ಜೀವನಕ್ಕೆ ಬೇಕಾದ ಉದ್ಯೋಗ ಕಲ್ಪಿಸುವ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಈ ಸಂಸ್ಥೆಯ ಜೊತೆ ಹಿರಿಯ ನಟ ಶಿವರಾಮ್ ಕಳೆದ 24 ವರ್ಷಗಳಿಂದ ಕೈ ಜೋಡಿಸುತ್ತಾ, ಹಲವು ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ. ಈಗ ಕಿಚ್ಚ ಸುದೀಪ್ ಬೆಳ್ಳಿ ಮಹೋತ್ಸವನ್ನ ನಮ್ಮ ಸಂಸ್ಥೆಯೊಂದಿಗೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.