ಸಿನಿಮಾ ನಟ-ನಟಿಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿರುವುದು ಸಹಜ. ಆದರೆ ಈ ಸ್ಟಾರ್ಗಳ ಮುದ್ದಿನ ಮಕ್ಕಳು ಸಿನಿಮಾದಲ್ಲಿ ಹೆಸರು ಮಾಡದೇ ಬಹಳ ಚಿಕ್ಕ ವಯಸ್ಸಿನಲ್ಲೇ ಎಲ್ಲರ ಮನ ಸೆಳೆದುಬಿಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಕೂಡಾ ಅಪ್ಪ ಅಮ್ಮನಂತೆಯೇ ಜನರನ್ನು ಸೆಳೆದ ಮಕ್ಕಳ ಬಗ್ಗೆ ಹೇಳ್ತೀವಿ ಕೇಳಿ.
ಸ್ಯಾಂಡಲ್ವುಡ್ನಲ್ಲಿ ಮಗುವಾಗಿದ್ದಾಗಲೇ ಅಪ್ಪ, ಅಮ್ಮನಂತೆ ಸೆಲಬ್ರಿಟಿಯಾಗಿರುವ ಮಗು ಅಂದ್ರೆ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ. ರಾಕಿಂಗ್ ಸ್ಟಾರ್ ಲಕ್ಕಿ ಡಾಟರ್ ಆಗಿರುವ ಐರಾ, ಆಗಾಗ ಅಪ್ಪ ಹಾಗೂ ಅಮ್ಮನ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾನೇ ಇರುತ್ತಾಳೆ. ತನ್ನ ಮುದ್ದು ಮುಖ, ತುಂಟಾಟ, ತೊದಲು ಮಾತಿನ ಮೂಲಕ ಐರಾ ಕೂಡಾ ಈಗಾಗಲೇ ಸೆಲಬ್ರಿಟಿ ಆಗಿದ್ದಾಳೆ. ಮಿಸ್ಟರ್ ಅ್ಯಂಡ್ ಮಿಸಸ್ ರಾಮಾಚಾರಿ ಮುದ್ದಿನ ಮಗಳಾಗಿರುವ ಐರಾ, ಕೆಲವು ದಿನಗಳ ಹಿಂದೆ ತಮ್ಮನ ಜೊತೆ ಬೊಂಬಾಂಟ್ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾಳೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಅಪ್ಪನಂತೆ ಪ್ರಾಣಿಗಳನ್ನು ಇಷ್ಟಪಡುವ ಸ್ಟಾರ್ ಕಿಡ್ ಅಂದರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಮುದ್ದಿನ ಮಗ ವಿನೀಶ್. ದರ್ಶನ್ ಜೊತೆ ಐರಾವತ ಸಿನಿಮಾದಲ್ಲಿ ನಟಿಸುವ ಮೂಲಕ ವಿನೀಶ್ ದಾಸನ ಅಭಿಮಾನಿಗಳಿಗೆ ಬಹಳ ಇಷ್ಟ ಆಗಿದ್ದಾರೆ. ಕೆಲವು ದಿನಗಳ ಹಿಂದೆ ದರ್ಶನ್ ಜೊತೆ ಕುದುರೆ ಸವಾರಿ ಅಭ್ಯಾಸ ಮಾಡುವ ಮೂಲಕ ವಿನೀಶ್ ಗಮನ ಸೆಳೆದಿದ್ದರು. ದರ್ಶನ್ ಜೊತೆಗಾರರೊಂದಿಗೆ ವಿನೀಶ್ ಹೊರಗೆ ಹೋದಾಗ ದರ್ಶನ್ಗೆ ದೊರೆತಷ್ಟೇ ಗೌರವ ಮಗ ವಿನೀಶ್ಗೂ ದೊರೆತಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸ್ಯಾಂಡಲ್ವುಡ್ ರಾಜಕುಮಾರ ಎಂದೇ ಕರೆಸಿಕೊಂಡಿರುವ ನಟ ಪುನೀತ್ ರಾಜ್ಕುಮಾರ್. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟ ಆಗುವ ಪವರ್ಸ್ಟಾರ್ಗೆ, ವಂದಿತಾ ಮತ್ತು ಧೃತಿ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಪುನೀತ್ ರಾಜ್ಕುಮಾರ್ ರೀತಿ ವಂದಿತಾ ಮತ್ತು ಧೃತಿ ಬಹಳ ಸಿಂಪಲ್. ಓದೋದ್ರಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ವಂದಿತಾ ಮತ್ತು ಧೃತಿ ಪುನೀತ್ ಮತ್ತು ಅಶ್ವಿನಿ ದಂಪತಿಯ ಪ್ರೀತಿಯ ಪುತ್ರಿಯರು. ಪುನೀತ್ ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಮಕ್ಕಳ ಜೊತೆ ಫಾರಿನ್ ಟ್ರಿಪ್ ಹೋಗುವುದನ್ನು ಮಾತ್ರ ಮರೆಯುವುದಿಲ್ಲ.
ಪತಿ-ಪತ್ನಿ ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜೋಡಿ ಎಂದರೆ ಉಪೇಂದ್ರ ಹಾಗೂ ಪ್ರಿಯಾಂಕ. ಈ ದಂಪತಿಗೆ ಆಯುಷ್ ಮತ್ತು ಐಶ್ವರ್ಯ ಎಂಬ ಮಕ್ಕಳಿದ್ದಾರೆ. ಐಶ್ವರ್ಯ ಈಗಾಗ್ಲೇ ಅಮ್ಮ ಪ್ರಿಯಾಂಕ ಜೊತೆ ದೇವಕಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ಧಾರೆ. ಮುಂದಿನ ದಿನಗಳಲ್ಲಿ ಉಪೇಂದ್ರ ಮಗ ಆಯುಷ್ ಹಾಗೂ ಮಗಳು ಇಬ್ಬರೂ ಚಿತ್ರರಂಗಕ್ಕೆ ಬಂದರೆ ಆಶ್ಚರ್ಯ ಇಲ್ಲ.
ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿಯ ಏಕೈಕ ಪುತ್ರಿ ಸಾನ್ವಿ. ಸುದೀಪ್ ಮುದ್ದಿನ ಮಗಳಾಗಿರುವ ಸಾನ್ವಿ ಕೂಡಾ, ಅಪ್ಪ ಅಮ್ಮನಂತೆ ಸೆಲಬ್ರಿಟಿಯಾಗಿದ್ದಾರೆ. ಸಿನಿಮಾ, ಕ್ರಿಕೆಟ್, ರಿಯಾಲಿಟಿ ಶೋ, ಜಾಹಿರಾತು ಸೇರಿದಂತೆ ಎಷ್ಟೇ ಕೆಲಸ ಇದ್ದರೂ ಸುದೀಪ್ ಮಗಳ ಜೊತೆ ಸಮಯ ಕಳೆಯೋದನ್ನು ಮರೆಯೋದಿಲ್ಲ. ಅಪ್ಪನ ಜೊತೆ ರಿಯಾಲಿಟಿ ಶೋ ಹಾಗೂ ಸಿನಿಮಾ ಪ್ರಮೋಷನ್ಗಳಲ್ಲಿ ಕಾಣಿಸಿಕೊಳ್ಳುವ ಸಾನ್ವಿ, ಅಪ್ಪನ ರೀತಿ ಸೆಲಬ್ರಿಟಿಯಾಗಿದ್ದಾರೆ.
ಕಾಮಿಡಿ ಮಾಡ್ತಾ ಗೋಲ್ಡನ್ ಸ್ಟಾರ್ ಆದ ನಟ ಗಣೇಶ್ಗೆ ಚಾರಿತ್ಯ್ರ ಮತ್ತು ವಿಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಗಣೇಶ್ ಮಕ್ಕಳು ಕೂಡಾ ಅಪ್ಪನ ಹಾದಿಯನ್ನು ಫಾಲೋ ಮಾಡ್ತಿದ್ದಾರೆ ಅನ್ನೋದಿಕ್ಕೆ ಚಮಕ್ ಚಿತ್ರದಲ್ಲಿ ಚಾರಿತ್ಯ್ರ, ಗೀತಾ ಚಿತ್ರದಲ್ಲಿ ವಿಹಾನ್ ಅಪ್ಪನೊಂದಿಗೆ ನಟಿಸಿರುವುದೇ ಸಾಕ್ಷಿ.
ಉಗ್ರಂ ಸಿನಿಮಾ ಮೂಲಕ ಮರುಜನ್ಮ ಪಡೆದ ನಟ ಶ್ರೀಮುರಳಿ. ಈ ಮದಗಜನಿಗೆ ಅಗಸ್ತ್ಯ ಮತ್ತು ಅಥೀವಾ ಎಂಬ ಇಬ್ಬರು ಮಕ್ಕಳಿದ್ದಾರೆ. ಅಗಸ್ತ್ಯ ಹಾಗೂ ಅಥೀವಾ ಸಿನಿಮಾದಲ್ಲಿ ನಟಿಸದೇ ಇದ್ರೂ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಅಪ್ಪ ಅಮ್ಮನ ಜೊತೆ ಗಮನ ಸೆಳೆಯುವ ಮೂಲಕ, ಚಿಕ್ಕವಯಸ್ಸಿನಲ್ಲೇ ಸೆಲಬ್ರಿಟಿಗಳಾಗಿದ್ದಾರೆ.
ನೆನಪಿರಲಿ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ಪಟ್ಟ ಅಲಂಕರಿಸಿದ ನಟ ಪ್ರೇಮ್. ಈ ಲವ್ಲಿಸ್ಟಾರ್ಗೆ ಇಬ್ಬರು ಮಕ್ಕಳಿದ್ದಾರೆ. ಮಗ ಏಕಾಂತ್ ಮಾಮು ಟೀ ಅಂಗಡಿ, ರಾಮರಾಜ್ಯ, ಗಾಂಧಿ ತಾತನ ಕನಸು ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ. ಮಗಳು ಅಮೃತ ಸಿನಿಮಾದಲ್ಲಿ ನಟಿಸದಿದ್ದರೂ ತನ್ನ ಚೆಲುವಿನಿಂದ ಎಲ್ಲರನ್ನು ಸೆಳೆದಿದ್ಧಾರೆ.
ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಖ್ಯಾತಿ ಪಡೆದ ಶ್ವೇತಾ ಶ್ರೀವಾತ್ಸವ್ಗೆ ಅಶ್ಮಿತಾ ಎಂಬ ಮುದ್ದಾದ ಮಗಳಿದ್ದಾಳೆ. ಈ ಮಗುವಿಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳಿದ್ದಾರೆ.
ಒಟ್ಟಿನಲ್ಲಿ ಈ ಎಲ್ಲಾ ಸ್ಟಾರ್ ಕಿಡ್ಗಳು ಒಂದಲ್ಲಾ ಒಂದು ರೀತಿಯಲ್ಲಿ ಹೆಸರು ಮಾಡಿರುವುದಂತೂ ನಿಜ.