ಸ್ಯಾಂಡಲ್ವುಡ್ನ ಈ ವರ್ಷದ ಬಹು ಜನಪ್ರಿಯ ನಟಿ ಶ್ರೀಲೀಲಾ 'ಕಿಸ್ 'ಹಾಗೂ 'ಭರಾಟೆ' ಸಿನಿಮಾಗಳಿಂದ ಖ್ಯಾತಿ ಪಡೆದವರು. ಶ್ರೀಲೀಲಾ ಈಗ ಮೂರನೇ ಸಿನಿಮಾಕ್ಕೆ ರೆಡಿಯಾಗಿದ್ದಾರೆ. ‘ಪಂಚತಂತ್ರ’ ಸಿನಿಮಾ ನಾಯಕ ವಿಹಾನ್ ಜೊತೆ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ.
ಹೆಸರಾಂತ ನಿರ್ಮಾಣ ಹಾಗೂ ವಿತರಣಾ ಸಂಸ್ಥೆ ಜಯಣ್ಣ ಕಂಬೈನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದು ಚಿತ್ರಕ್ಕೆ 'ಲೆಟ್ಸ್ ಬ್ರೇಕ್ಅಪ್' ಎಂದು ಹೆಸರಿಡಲಾಗಿದೆ. ಚಿತ್ರವನ್ನು ಸ್ವರೂಪ್ ನಿರ್ದೇಶಿಸಲಿದ್ದಾರೆ. ಮುಂದಿನ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನದಂದು ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ನಿರ್ದೇಶಕ ಸ್ವರೂಪ್ಗೆ ಇದು ಎರಡನೇ ಸಿನಿಮಾವಾಗಿದ್ದು 'ಲಖ್ನೌ ಟು ಬೆಂಗಳೂರು' ಎಂಬ ಸಿನಿಮಾ ಚಿತ್ರೀಕರಣ ಈಗಾಗಲೇ ಜರುಗುತ್ತಿದೆ. ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ನಂತರ 'ಲೆಟ್ಸ್ ಬ್ರೇಕ್ಅಪ್' ಆರಂಭವಾಗಲಿದೆ.
'ಲೆಟ್ಸ್ ಬ್ರೇಕ್ಅಪ್' ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು ಚಿತ್ರಕ್ಕೆ 'ಫಾರ್ ಎವರ್' ಎಂಬ ಅಡಿಬರಹವಿದೆ. ಚಿತ್ರಕ್ಕೆ ವಿನೀತ್ ರಾಜ್ ಮೆನನ್ ಸಂಗೀತವಿದೆ. ಸಿನಿಮಾದಲ್ಲಿ ಮೂರು ಸಾಹಸ ಸನ್ನಿವೇಶಗಳಿದ್ದು ಮಂಗಳೂರು ಹಾಗೂ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ಜರುಗಲಿದೆ.