ಖ್ಯಾತ ಸಂಗೀತ ದಿಗ್ಗಜ ಎಸ್.ಪಿ. ಬಾಲಸುಬ್ರಮಣ್ಯಂ ನಿನ್ನೆ ನಮ್ಮೆಲ್ಲನ್ನು ಅಗಲಿದ್ದಾರೆ. ಆಸ್ಪತ್ರೆಗೆ ಸೇರುವಾಗ ಇನ್ನೆರಡು ದಿನಗಳಲ್ಲಿ ಗುಣಮುಖರಾಗಿ ವಾಪಸ್ ಬರುತ್ತೇನೆ ಎಂದು ಹೇಳಿದ್ದ ಎಸ್ಪಿಬಿ ಮತ್ತೆ ವಾಪಸ್ ಬರಲೇ ಇಲ್ಲ. ಅವರೊಂದಿಗೆ ಒಡನಾಟವನ್ನು ಚಿತ್ರರಂಗದ ಗಣ್ಯರು ನೆನೆದು ಕಂಬನಿ ಮಿಡಿದಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಎಸ್ಪಿಬಿ ನೀಡಿರುವ ಕೊಡುಗೆ ಅಪಾರ. ಅದೇ ರೀತಿ ಅವರು ಚಿತ್ರರಂಗ ವನ್ನು ಹೊರತುಪಡಿಸಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಲ್ಲಿ ಎತ್ತಿದ ಕೈ. ಎಸ್ಪಿಬಿ ಅವರ ಪೂರ್ವಜರ ಮನೆಯೊಂದು ನೆಲ್ಲೂರಿನ ತಿಪ್ಪಾರಾಜುವಾರಿ ರಸ್ತೆಯಲ್ಲಿ ಇದೆ. ಇದೇ ವರ್ಷ ಫೆಬ್ರವರಿಯಂದು ಎಸ್ಪಿಬಿ ಆ ಮನೆಯನ್ನು ಕಂಚಿ ಕಾಮಕೋಟಿ ಪೀಠ ಬಳಸಿಕೊಳ್ಳಲು ಕಾಗದ ಪತ್ರಗಳಿಗೆ ಸಹಿ ಮಾಡಿ ನೀಡಿದ್ದರು. ಮಠಕ್ಕೆ ಈ ಮನೆಯನ್ನು ಉಡುಗೊರೆಯಾಗಿ ನೀಡಿ ಇಲ್ಲಿ ವೇದ ಪಾಠಶಾಲೆ ಆಗಲಿ ಎಂದು ಇಚ್ಛಿಸಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ ಶ್ರೀ ಶಂಕರ ವಿಜಯೇಂದ್ರ ಸ್ವಾಮಿಗಳು ಎಸ್ಪಿಬಿ ಅವರ ತಂದೆ ಪಂಡಿತಾರಾಧ್ಯುಲ ಸಾಂಬಮೂರ್ತಿ ಅವರನ್ನು ನೆನಪು ಮಾಡಿಕೊಂಡು ಮಾತನಾಡಿದ್ದರು.
ಎಸ್ಪಿಬಿ ಅವರ ತಂದೆ ಈ ಮನೆಯಲ್ಲಿ ನೆಲೆಸಿರುವಾಗಲೇ ನೆಲ್ಲೂರಿನಲ್ಲಿ ಶ್ರೀ ತ್ಯಾಗರಾಜ ಸ್ಮರಣೋತ್ಸವ ಆಚರಣೆಗೆ ಬಹಳ ವರ್ಷಗಳ ಕಾಲ ತೊಡಗಿಕೊಂಡಿದ್ದನ್ನು ಶ್ರೀ ಶಂಕರ ಸ್ವಾಮೀಜಿ ಅವರು ನೆನಪಿಸಿಕೊಂಡಿದ್ದರು. ಎಸ್ಪಿಬಿ ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ನಾವು ಮಾಡಿದ ದಾನ, ಧರ್ಮ ಇತರರಿಗೆ ತಿಳಿಯಬಾರದು ಎಂಬುದು ಅವರ ಉದ್ದೇಶವಾಗಿತ್ತು.