ಒಂದೂವರೆ ವರ್ಷಗಳಿಂದ ಚಿತ್ರೀಕರಣ ಮಾಡ್ತಾ ಇರುವು ಚಾರ್ಲಿ 777 ಸಿನಿಮಾ ಕೊನೆಗೂ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಮಾತನಾಡಿ, 164 ದಿನಗಳ ಶೂಟಿಂಗ್ ಬಹಳ ಅದ್ಭುತವಾಗಿತ್ತು. ಚಾರ್ಲಿ ಚಿತ್ರೀಕರಣದ ಅದ್ಭುತವಾದ ಪಯಣವನ್ನು ನಿನ್ನೆ ಕುಂಬಳಕಾಯಿ ಒಡೆಯುವುದರ ಮೂಲಕ ಚಿತ್ರೀಕರಣ ಮುಗಿಸಿದ್ದೇವೆ ಎಂದರು.
ರಕ್ಷಿತ್ ಶೆಟ್ಟಿ ಡಿಸೆಂಬರ್ 31ರಂದು ಚಿತ್ರಮಂದಿರದಲ್ಲಿ ಭೇಟಿಯಾಗೋಣ ಎಂದು ಕುಂಬಳಕಾಯಿ ಹೊಡೆದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನಾಲ್ಲ ಆಗುತ್ತೆ ಅನ್ನೋದು ಈ ಚಿತ್ರದ ಕಥೆಯಾಗಿದೆ.
ಈ ಚಿತ್ರದ ಟಾರ್ಚರ್ ಸಾಂಗ್ ಇತ್ತಿಚೆಗಷ್ಟೇ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಐದು ಭಾಷೆಗಳಲ್ಲಿಯೂ ಪ್ರಸಿದ್ಧ ಹಿನ್ನೆಲೆ ಗಾಯಕರು ಹಾಡಿಗೆ ತಮ್ಮ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದರು.
ರಕ್ಷಿತ್ ಶೆಟ್ಟಿ ಜೊತೆ ಸಂಗೀತಾ ಶೃಂಗೇರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ರಾಜ್ ಬಿ. ಶೆಟ್ಟಿ, ಡ್ಯಾನಿಶ್ ಸೇಠ್, ಬಾಬಿ ಸಿಂಹ, ಬೇಬಿ ಶಾರ್ವರಿ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬಾಬಿ ಸಿಂಹ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಯುವ ನಿರ್ದೇಶಕ ಕಿರಣ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಚಾರ್ಲಿ 777 ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಜೊತೆಗೆ ಲ್ಯಾಬ್ರಡಾರ್ ಶ್ವಾನ ಪೂರ್ಣ ಪ್ರಮಾಣದ ಪಾತ್ರದಲ್ಲಿ ಕಾಣಿಸಿಕೊಂಡಿದೆ.
ಪರಮ್ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲ್ಮ್ ಬ್ಯಾನರ್ನಲ್ಲಿ ನಿರ್ಮಾಣ ಆಗುತ್ತಿದ್ದು, ಈ ಚಿತ್ರಕ್ಕೆ ಕಿರಣ್ ರಾಜ್ ಆ್ಯಕ್ಷನ್ ಹೇಳುತ್ತಿದ್ದಾರೆ. ಈ ಚಿತ್ರ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದ್ದು, ಚಿತ್ರಕ್ಕೆ ನೊಬಿನ್ ಪೌಲ್ ಸಂಗೀತವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಡಿಸೆಂಬರ್ನಲ್ಲಿ ಚಾರ್ಲಿ 777 ಸಿನಿಮಾ ಬಿಡುಗಡೆ ಆಗಲಿದೆ.