ಪೊಗರು ಖ್ಯಾತಿಯ ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ಕೆ.ಮಂಜು ಅವರ ಮಗ ಶ್ರೇಯಸ್ ನಟಿಸುತ್ತಿರುವುದು ಗೊತ್ತಿರುವ ವಿಷಯವೇ.. ಲಾಕ್ಡೌನ್ಗೂ ಮುನ್ನವೇ ಹೊಸಪೇಟೆಯಲ್ಲಿ ಚಿತ್ರದ ಸ್ಕ್ರಿಪ್ಟ್ ಪೂಜೆ ಆಗಿತ್ತು. ಬಹುಶಃ ಲಾಕ್‌ಡೌನ್ ಇಲ್ಲದಿದ್ದರೆ ಇಷ್ಟೊತ್ತಿಗೆ ಚಿತ್ರದ ಚಿತ್ರೀಕರಣವೇ ಮುಗಿದು ಹೋಗಿರುತ್ತಿತ್ತು. ಆದರೆ, ಅವೆಲ್ಲವೂ ಉಲ್ಟಾ ಆಗಿದೆ.
ಈಗ ಚಿತ್ರ ತಂಡದಿಂದ ಎರಡು ಹೊಸ ಅಪ್ಡೇಟ್ಗಳು ಬಂದಿವೆ. ಪ್ರಮುಖವಾಗಿ ಜುಲೈ 1ರಂದು ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ. ಅದರ ಮುಂದಿನ ವಾರವೇ, ಅಂದರೆ ಜುಲೈ 7ರಂದು ಗವಿಪುರಂನ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ.
ಸದ್ಯಕ್ಕೆ ಯಾವುದೇ ಹೊಸ ಚಿತ್ರದ ಮುಹೂರ್ತ ಆದ ಸುದ್ದಿ ಬಂದಿಲ್ಲ. ಒಂದು ವೇಳೆ ಜುಲೈ 7ರವರೆಗೂ ಯಾವುದೇ ಹೊಸ ಚಿತ್ರದ ಮುಹೂರ್ತವಾಗದಿದ್ದರೆ, ಶ್ರೇಯಸ್ ಅಭಿನಯದ ಈ ಚಿತ್ರವು ಲಾಕ್‌ಡೌನ್ ನಂತರ ಪ್ರಾರಂಭವಾದ ಮೊದಲ ಚಿತ್ರವಾಗಲಿದೆ.
ಓದಿ : 'ಸತ್ಯನಾರಾಯಣ್ ಕಿ ಕಥಾ' ಹೇಳಲು ಬರುತ್ತಿದ್ದಾರೆ ಬಿಟೌನ್ ಬೆಡಗಿ ಶ್ರದ್ಧಾ ಕಪೂರ್
ಜುಲೈ ಎರಡನೇ ವಾರದಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಬೆಂಗಳೂರು, ಬೆಳಗಾವಿ, ಹೊಸಪೇಟೆ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ಈ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಕರ್ನಾಟಕದ ಬೇರೆ ಬೇರೆ ಪ್ರದೇಶಗಳ ಪ್ರತಿಭೆಗಳನ್ನು ಆನ್ಲೈನ್ ಮೂಲಕ ಆಡಿಷನ್ ಮಾಡಿ ಆಯ್ಕೆ ಮಾಡಲಾಗಿದೆ.
ಈ ಹಿಂದೆ, ಟಗರು ಚಿತ್ರವನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಗುಜ್ಜಾಲ್ ಪುರುಷೋತ್ತಮ್ ತಮ್ಮ ಗುಜ್ಜಾಲ್ ಟಾಕೀಸ್ ಮೂಲಕ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಂದನ್ ಶೆಟ್ಟಿ ಸಂಗೀತವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡುತ್ತಿದ್ದಾರೆ.