ಮಕರ ಸಂಕ್ರಾಂತಿ ಎಂದರೆ ಆ ದಿನ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆಗಳಿರುತ್ತದೆ. ಸುಮಾರು 41 ದಿನಗಳ ಕಾಲ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ ಭಕ್ತರು ಶಬರಿಮಲೆಗೆ ತೆರಳಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಇನ್ನು ಶಬರಿಮಲೆಗೆ ಹೋಗಲು ಸಾಧ್ಯವಾಗದ ಭಕ್ತರು ತಮ್ಮ ಊರಿನ ಬಳಿಯಲ್ಲೇ ಇರುವ ಅಯ್ಯಪ್ಪ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಾರೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಕೂಡಾ ಇಂದು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಅಯ್ಯಪ್ಪನ ದೇವಸ್ಥಾನಕ್ಕೆ ತೆರಳಿದ ಶಿವಣ್ಣ ಅಯ್ಯಪ್ಪನ ದರ್ಶನ ಪಡೆದು ಪೂಜೆ ಸಲ್ಲಿಸಿ ಬಂದಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತಅಯ್ಯಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಿದ್ದ ಕಾರಣ ಶಿವರಾಜ್ಕುಮಾರ್ ಇಂದು ದೇವಸ್ಥಾನಕ್ಕೆ ತೆರಳಿದ್ದರು. ಅಣ್ಣಾವ್ರ ಕಾಲದಿಂದಲೂ ಅಯ್ಯಪ್ಪನ ಭಕ್ತರಾಗಿರುವ ಶಿವಣ್ಣ ಹಲವು ಬಾರಿ ಅಯ್ಯಪ್ಪನ ಮಾಲೆ ಧರಿಸಿ ಶಬರಿಮಲೆಗೆ ಹೋಗಿಬಂದಿದ್ದಾರೆ. ಕೆಲವು ದಿನಗಳ ಹಿಂದೆ ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಯಾತ್ರಿಗಳಿಗೆ ಶಿವಣ್ಣ ಅನ್ನದಾನ ಕೂಡಾ ಏರ್ಪಡಿಸಿದ್ದರು. ಇಂದು ಸಂಜೆ 6.45 ಕ್ಕೆ ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಕಾಣಿಸಿಕೊಂಡಿದ್ದು ಭಕ್ತರು ಜ್ಯೋತಿಯ ದರ್ಶನ ಪಡೆದಿದ್ದಾರೆ.