ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಸ್ಯಾಂಡಲ್ವುಡ್ನಲ್ಲಿ ಬಹಳ ಆತ್ಮೀಯ ಸ್ನೇಹಿತರು. ಎಷ್ಟರ ಮಟ್ಟಿಗೆ ಎಂದರೆ ಬುದ್ಧಿವಂತನ ಯಾವುದೇ ಚಿತ್ರದ ಸಮಾರಂಭವಾಗಲಿ ಅಲ್ಲಿ ಶಿವಣ್ಣ ತಪ್ಪದೆ ಹಾಜರಾಗಿ ಶುಭ ಕೋರಿ ಬರುವಷ್ಟು ಇವರ ಸ್ನೇಹ ಗಟ್ಟಿಯಾಗಿದೆ.
ಇವರಿಬ್ಬರ ಈ ಸ್ನೇಹಕ್ಕೆ ಮುನ್ನುಡಿ ಬರೆದದ್ದು 'ಓಂ' ಸಿನಿಮಾ ಎನ್ನಬಹುದು. ಶಿವಣ್ಣ ಅಭಿನಯದ ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದರು. ಈ ಸಿನಿಮಾ ಬಿಡುಗಡೆಯಾಗಿ 25 ವರ್ಷಗಳು ಕಳೆದರೂ ಅಭಿಮಾನಿಗಳಿಗೆ ಮಾತ್ರ ಈ ಚಿತ್ರದ ಮೇಲಿನ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಓಂ ನಿರ್ದೇಶನದ ನಂತರ ಶಿವಣ್ಣ ಹಾಗೂ ಉಪ್ಪಿ 'ಪ್ರೀತ್ಸೆ' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಈಗ ಮತ್ತೊಮ್ಮೆ ಇವರಿಬ್ಬರೂ ಜೊತೆಯಾಗಿ ಮತ್ತೊಂದು ಸಿನಿಮಾ ಮಾಡಲಿದ್ದಾರಂತೆ.
7 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿದ ಶಿವಣ್ಣ, ಮತ್ತೆ ಉಪೇಂದ್ರ ನಿರ್ದೇಶನದಲ್ಲಿ 10 ಭಾಷೆಗಳಲ್ಲಿ ಸಿನಿಮಾ ಮಾಡುತ್ತೇವೆ ಎಂದರು. ಅಷ್ಟೇ ಅಲ್ಲ, ಉಪೇಂದ್ರ ಅವರನ್ನು ಶಿವಣ್ಣ ಹಾಡಿ ಹೊಗಳಿದರು. 25 ವರ್ಷಗಳ ಹಿಂದೆಯೇ ರಿವರ್ಸ್ ಸ್ಕ್ರೀನ್ ಪ್ಲೇ ಮಾಡಿ ಸಕ್ಸಸ್ ಕಂಡಿದ್ದ ನಿರ್ದೇಶಕ ಉಪೇಂದ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಾನು ಹಾಗೂ ಉಪೇಂದ್ರ ಮತ್ತೆ ಚಿತ್ರ ಮಾಡುವ ಬಗ್ಗೆ ಆಗ್ಗಾಗ್ಗೆ ಮಾತನಾಡುತ್ತಿರುತ್ತೇವೆ. ಹೀಗಾಗಿ ಮತ್ತೆ ಉಪೇಂದ್ರ ನಿರ್ದೇಶನದಲ್ಲಿ ಇಡೀ ಪ್ರಪಂಚವೇ ನೋಡುವ ಸಿನಿಮಾ ಮಾಡ್ತಿವಿ ಎಂದು ಶಿವಣ್ಣ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿವರಾಜ್ ಕುಮಾರ್ ಹಾಗೂ ಉಪೇಂದ್ರ ಜೊತೆ ಸೇರಿ ಮತ್ತೆ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ ಕೂಡಾ.