ಸತ್ಯ ಪ್ರಕಾಶ್, 'ರಾಮಾ ರಾಮಾ ರೇ', 'ಒಂದಲ್ಲಾ ಎರಡಲ್ಲಾ' ಸಿನಿಮಾದಂತಹ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿ, ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿರುವ ನಿರ್ದೇಶಕ. 'ಒಂದಲ್ಲಾ ಎರಡಲ್ಲಾ' ಸಿನಿಮಾ ನಂತರ ನಿರ್ದೇಶಕ ಸತ್ಯ ಪ್ರಕಾಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.
ಕಳೆದ ಐದಾರು ತಿಂಗಳಿನಿಂದ ಸತ್ಯ ಪ್ರಕಾಶ್ ಪವರ್ ಸ್ಟಾರ್ ಮ್ಯಾನರಿಸಂಗೆ ತಕ್ಕಂತೆ ಚಿತ್ರಕಥೆ ಬರೆಯುತ್ತಿದ್ದಾರಂತೆ. ನಿರ್ದೇಶಕ ಸತ್ಯ ಪ್ರಕಾಶ್ ಹೇಳುವ ಪ್ರಕಾರ, 'ರಾಮಾ ರಾಮಾ ರೇ' ಸಿನಿಮಾ ರಿಲೀಸ್ ಆದಾಗ ಆ ಸಿನಿಮಾ ನೋಡಿ ಪುನೀತ್ ರಾಜ್‍ಕುಮಾರ್ ಮೆಚ್ಚಿಕೊಂಡಿದ್ದರಂತೆ. ಆ ಸಮಯದಲ್ಲಿ ಅವಕಾಶ ಸಿಕ್ಕರೆ ಒಟ್ಟಿಗೆ ಕೆಲಸ ಮಾಡೋಣ ಎಂದು ಕೂಡಾ ಪುನೀತ್ ಹೇಳಿದ್ದರಂತೆ. ಇದೀಗ ಅದಕ್ಕೆ ಕಾಲ ಕೂಡಿ ಬಂದಿದೆ. ವಿಶೇಷ ಎಂದರೆ ಈ ಸಿನಿಮಾವನ್ನು ಪುನೀತ್ ತಮ್ಮ ಪಿಆರ್‌ಕೆ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿದ್ದಾರೆ.
ಪುನೀತ್ ರಾಜ್‍ಕುಮಾರ್ ತಮ್ಮ ಸ್ವಂತ ಬ್ಯಾನರ್ ಆರಂಭಿಸಿದಾಗಿನಿಂದ ಅವರ ಬ್ಯಾನರ್ನಿಂದ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಉತ್ತಮ ಚಿತ್ರಕಥೆಗಳಿಗೆ ಅವರು ಒತ್ತು ನೀಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ, ಅವರ ಹೋಮ್ ಬ್ಯಾನರ್‌ನಲ್ಲಿ ತೆರೆ ಕಂಡ 'ಕವಲು ದಾರಿ' ಸಿನಿಮಾ, ರಿಲೀಸ್‌ಗೆ ರೆಡಿಯಾಗಿರುವ 'ಮಾಯಾ ಬಜಾರ್' ಹಾಗೂ 'ಲಾ' ಚಿತ್ರಗಳು. ಸದ್ಯಕ್ಕೆ ನಿರ್ದೇಶಕ ಸತ್ಯ ಪ್ರಕಾಶ್ ಚಿತ್ರಕಥೆ ಪೂರ್ಣಗೊಳಿಸಿದ ನಂತರ ಪುನೀತ್ಗೆ ನೀಡುತ್ತಾರಂತೆ. ಪುನೀತ್ ಓಕೆ ಹೇಳಿದ ಕೂಡಲೇ ಚಿತ್ರದ ಶೂಟಿಂಗ್ ಆರಂಭವಾಗುವುದು ಗ್ಯಾರಂಟಿ.