ಮುಂಬೈ: ಖ್ಯಾತ ನೃತ್ಯ ಸಂಯೋಜಕಿ ಸರೋಜ್ಖಾನ್ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 71 ವರ್ಷದ ಅವರನ್ನು ಶನಿವಾರದಂದು ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರೋಜ್ ಖಾನ್ ಆರೋಗ್ಯದ ಕುರಿತು ಮಾತನಾಡಿದ ಅವರ ಸಂಬಂಧಿಕರೊಬ್ಬರು, 'ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಕೊರೊನಾ ಟೆಸ್ಟ್ ಸಹ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಒಂದೆರಡು ದಿನದಲ್ಲಿ ಡಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ' ಎಂದು ಹೇಳಿದ್ದಾರೆ.
ಇನ್ನು ಸರೋಜ್ ಖಾನ್ ಅವರು, ನಟಿ ಶ್ರೀದೇವಿ ಅಭಿನಯಿಸಿದ್ದ ನಾಗಿನಾ ಚಿತ್ರದ 'ಮೇನ್ ನಾಗಿನ್ ತು ಸಪೆರಾ' ಮತ್ತು ಮಿಸ್ಟರ್ ಇಂಡಿಯಾ ಸಿನಿಮಾದ 'ಹವಾ ಹವಾ' ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಅಷ್ಟೇ ಅಲ್ಲದೆ, ಮಾಧುರಿ ದೀಕ್ಷಿತ್ ಅವರ ಕೆಲ ಸಿನಿಮಾಗಳ ಹಾಡಿಗೂ ನೃತ್ಯ ಸಂಯೋಜನೆ ಮಾಡಿ ಗಮನ ಸೆಳೆದಿದ್ದರು. ಇನ್ನು 80ರ ದಶಕದಲ್ಲಿ ಬಾಲಿವುಡ್ನಲ್ಲಿ ಜನಪ್ರಿಯತೆ ಗಳಿಸಿದ್ದರು.
ಇತ್ತೀಚೆಗೆ ಬಿಡುಗಡೆಯಾದ ಕಂಗನಾ ರಣಾವತ್ ಅಭಿನಯದ ಮಣಿಕರ್ಣಿಕ ಸಿನಿಮಾ ಹಾಗೂ ತನು ವೆಡ್ಸ್ ಮನು ರಿಟರ್ನ್ಸ್ ಸಿನಿಮಾಗೂ ನೃತ್ಯ ಸಂಯೋಜನೆ ಮಾಡಿದ್ದರು. ಸದ್ಯ ಇವರು ಕೊನೆಯದಾಗಿ ನೃತ್ಯ ಸಂಯೋಜಿಸಿದ್ದು, ಮಾಧುರಿ ದೀಕ್ಷಿತ್ ಅಭಿನಯಿಸಿದ್ದ ಕಳಂಕ್ ಸಿನಿಮಾಗೆ.