ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾ ತೆರೆಕಂಡ ಬಳಿಕ ಧನಂಜಯ್ 'ಡಾಲಿ' ಎಂದೇ ಖ್ಯಾತಿ ಪಡೆದರು. ಪ್ರತಿ ಸಿನಿಮಾಗೂ ವಿಭಿನ್ನ ಪಾತ್ರ ಆಯ್ಕೆ ಮಾಡಿಕೊಳ್ಳುವ ಇವರು ಬೆಳ್ಳಿತೆರೆಗೆ ಕಾಲಿಡಲು ಸಾಕಷ್ಟು ಶ್ರಮಪಟ್ಟಿದ್ದಾರೆ. 'ಜಯನಗರ 4th ಬ್ಲಾಕ್' ಎಂಬ ಕಿರುಚಿತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ರೀತಿಯ ಛಾಪು ಮೂಡಿಸಿದವರು ಧನಂಜಯ್.
ರಂಗಭೂಮಿಯಲ್ಲಿ ಅಭಿನಯಿಸುತ್ತಿದ್ದ ಧನಂಜಯ್ಗೆ ನಿರ್ದೇಶಕ ಗುರುಪ್ರಸಾದ್ ತಮ್ಮ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಅವಕಾಶ ನೀಡಿದ್ದರು. ಈ ಚಿತ್ರಕ್ಕೆ ಬಾಕ್ಸ್ ಆಫೀಸ್ನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದರೂ ಸಹ ಡಾಲಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿರುವ ಡಾಲಿ ಧನಂಜಯ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ.
ನಿರ್ಮಾಪಕನಾದ ಡಾಲಿ: ನಾಯಕ ನಟ, ವಿಲನ್ ಆಗಿ ತಮ್ಮ ಪ್ರತಿಭೆ ಸಾಬೀತುಪಡಿಸಿರುವ ಧನಂಜಯ್ ನಿರ್ಮಾಪಕರಾಗಿ ತನ್ನ ಛಾಪು ಮೂಡಿಸಲು ಮುಂದೆ ಬಂದಿದ್ದಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರದೇ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಹೆಡ್ ಬುಷ್' ಚಿತ್ರದ ಫಸ್ಟ್ ಲುಕ್ ಟೈಟಲ್ ಟೀಸರ್ ಇಂದು ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಈ ಚಿತ್ರದಲ್ಲಿ ಧನಂಜಯ್, ಬೆಂಗಳೂರಿನ ಮಾಜಿ ಡಾನ್ ಎಂ.ಪಿ. ಜಯರಾಜ್ ಅವರ ಪಾತ್ರ ಮಾಡುತ್ತಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಆಗಸ್ಟ್ 9ರಿಂದ ಸದ್ದಿಲ್ಲದೆ ಪ್ರಾರಂಭವಾಗಿದೆ.
ಮಲಯಾಳಂಗೂ ಲಗ್ಗೆ ಇಟ್ಟ ಬಹುಮುಖ ಪ್ರತಿಭೆ: ಈ ಮಧ್ಯೆ, ಅವರು ಸದ್ದಿಲ್ಲದೆ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದ ಧನಂಜಯ್, ಇದೀಗ '21 ಅವರ್ಸ್' ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಮೂಲಕ ಮಲಯಾಳಂನಲ್ಲೂ ನಟಿಸಲಿದ್ದಾರೆ. ಧನಂಜಯ್ ಹುಟ್ಟುಹಬ್ಬದ ಪ್ರಯುಕ್ತ, ಭಾನುವಾರ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
21 ಅವರ್ಸ್ ಚಿತ್ರವನ್ನು ಜಯಶಂಕರ್ ಪಂಡಿತ್ ಎಂಬವರು ನಿರ್ದೇಶಿಸುತ್ತಿದ್ದು, ಕನ್ನಡದಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ದೊಡ್ಡ ಹೆಸರು ಮಾಡಿರುವ ಛಾಯಾಗ್ರಾಹಕ ತಿರು ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಲಾಕ್ಡೌನ್ ಮುಗಿದ ಮೇಲೆ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಬೆಂಗಳೂರಿನ ಸುತ್ತಮುತ್ತ ನಡೆದಿದೆ.
ಬೆಂಗಳೂರಿನಲ್ಲಿರುವ ಮಲಯಾಳಿ ಯುವತಿಯ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಧನಂಜಯ್, ದುರ್ಗಾ ಕೃಷ್ಣ, ಸುದೇವ್ ನಾಯರ್ ಮತ್ತು ರಾಹುಲ್ ಮಹದೇವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೂಪರ್ಟ್ ಫರ್ನಾಂಡಿಸ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರ ಚಿತ್ರಮಂದಿರಗಳಿಗಿಂತ ಮೊದಲು ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.