ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬಿಡುಗಡೆಯಾಗಿ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ರಕ್ತಚಂದನ ಮಾಫಿಯಾವನ್ನೇ ಕೇಂದ್ರವನ್ನಾಗಿಟ್ಟು ಕೊಂಡು ಆಂಧ್ರದ ದಟ್ಟಾರಣ್ಯದಲ್ಲಿ ನಡೆಯುವ ಈ ಕರಾಳ ದಂಧೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸುವಂತೆ ಮಾಡಿದೆ.
ಇದೀಗ ಪುಷ್ಪ ಚಿತ್ರ ಶೈಲಿಯಲ್ಲಿ ಸಂಚಾರಿ ವಿಜಯ್ ಅಭಿನಯದ ಮೇಲೊಬ್ಬ ಮಾಯಾವಿ ಚಿತ್ರವೂ ಕೂಡ ಮಾಫಿಯಾದ ಬ್ಯಾಕ್‌ಡ್ರಾಪ್‌ನಲ್ಲೇ ನಡೆಯುವ ಕಥೆಯಾಗಿದೆ. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಇರುವೆ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ರಂಗಭೂಮಿ ಪ್ರತಿಭೆ ಅನನ್ಯ ಶೆಟ್ಟಿ ನಾಯಕಿಯಾಗಿದ್ದು, ಬಿಗ್‌ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊಟ್ಟ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಕೃಷ್ಣಮೂರ್ತಿ ಕವತ್ತಾರ್, ಪವಿತ್ರಾ ಜಯರಾಮ್, ಬೆನಕ ನಂಜಪ್ಪ, ಎಮ್ ಕೆ ಮಠ, ನವೀನ್‌ಕುಮಾರ್, ಲಕ್ಷ್ಮಿ ಅರ್ಪಣ್, ಮುಖೇಶ್ ಹಾಗೂ ಡಾ. ಮನೋನ್ಮಣಿ ಹೀಗೆ ಸಾಕಷ್ಟು ರಂಗಭೂಮಿ ಪ್ರತಿಭೆಗಳನ್ನು ಚಿತ್ರದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಾಣಬಹುದು.
ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಹರಳು ಕಲ್ಲು ದಂಧೆ ಮತ್ತೆ ಕಾರ್ಯಾರಂಭಗೊಂಡಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯದಲ್ಲಿ ಈ ನಿಗೂಢ ಹರಳು ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ.
ಕಳೆದ ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್ ಮಲೆ ಎಂಬ ಬೆಟ್ಟಗಳಲ್ಲಿ ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಆಗ ಕೆಜಿಯೊಂದಕ್ಕೆ 500 ರೂಪಾಯಿ ಇಂದ ಆರಂಭವಾಗಿ ಸಾವಿರಾರು ರೂಪಾಯಿ ಬೆಲೆ ದೊರೆಯುತ್ತಿತ್ತು.
ಆಭರಣ, ಉಂಗುರುಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರು ಹುಡುಕಾಟ ನಡೆಸುತ್ತಿದ್ದು, ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ದಶಕಗಳ ಹಿಂದೆ ನಿಂತೂ ಹೋಗಿದ್ದ ಹರಳು ಕಲ್ಲಿನ ಗಣಿಗಾರಿಕೆ ಮತ್ತೆ ಆರಂಭಗೊಂಡಿದ್ದು, ಕೂಜಿಮಲೆ, ಸುಟ್ಟತ್ ಮಲೆ ಅರಣ್ಯ ಪ್ರದೇಶದಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಅಚ್ಚರಿಯ ವಿಚಾರವೆಂದರೆ, ಮೇಲೊಬ್ಬ ಮಾಯಾವಿ ಚಿತ್ರತಂಡ ಈ ಅಪಾಯದ ಜಾಗಗಳಲ್ಲೇ ಚಿತ್ರೀಕರಣವನ್ನು ಮಾಡಿತ್ತು. ಬಿ. ನವೀನ್‌ಕೃಷ್ಣ ನಿರ್ದೇಶನ ಮಾಡಿರೋ ಈ ಸಿನಿಮಾವನ್ನ, ಶ್ರೀ ಕಟೀಲ್ ಸಿನಿಮಾಸ್ ಬ್ಯಾನರ್‌ನ ಅಡಿಯಲ್ಲಿ ಭರತ್ ಕುಮಾರ್ ಮತ್ತು ತನ್ವಿ ಅಮಿನ್ ಕೊಲ್ಯ ಮೇಲೊಬ್ಬ ಮಾಯಾವಿ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.
ಓದಿ: ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ನಾನೇ ಕಾನೂನು ಹೋರಾಟ ಮಾಡ್ತೇನೆ: ಸಿಎಂ ಇಬ್ರಾಹಿಂ ವಾರ್ನಿಂಗ್