ಐಪಿಎಸ್ ಅಧಿಕಾರಿ ಡಾಲಿ ಧನಂಜಯ್ ಅವರನ್ನು ನಟ ದುನಿಯಾ ವಿಜಿ ಗುರಾಯಿಸುತ್ತಿರುವ ಈ ಫೋಟೋಗಳು ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿವೆ. ಇತ್ತೀಚಿಗೆ ಸುದ್ದಿ ವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಸಿಸಿಬಿ ಆಯುಕ್ತ ಅಲೋಕ್ ಕುಮಾರ್, ಬೆಂಗಳೂರಿನ ರೌಡಿ ಶೀಟರ್ಗಳ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದರು. ಅಂದು ರೌಡಿ ಶೀಟರ್ ಸೈಲೆಂಟ್ ಸುನೀಲ್, ಆ ಆಫೀಸರ್ ಅವರನ್ನು ದುರುಗುಟ್ಟಿ ನೋಡಿದ್ದರು. ಈ ವೇಳೆ ಅಲೋಕ್ ಕುಮಾರ್, 'ಏನೊ ಗುರ್ರಾಯಿಸ್ತಿದ್ದಿಯಾ? ಕಣ್ಣು ಕೆಳಗೆ ಇಳಿಸೋ, ಸರಿಯಾಗಿ ನಿಂತ್ಕೋ ಅಂತಾ ಸರಿಯಾಗಿ ಚಳಿ ಬಿಡಿಸಿದ್ದರು.

ಅಂದು ನಡೆದ ಈ ನೈಜ ದೃಶ್ಯಕ್ಕೂ ವಿಜಿ ಅವರ ಸಲಗ ಚಿತ್ರಕ್ಕೂ ಲಿಂಕ್ ಮಾಡಲಾಗಿದೆ.ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಧನಂಜಯ್, ರೌಡಿ ಶೀಟರ್ನಂತೆ ಕಾಣಿಸಿಕೊಂಡಿರುವ ದುನಿಯಾ ವಿಜಿಗೆ ಅವಾಜ್ ಹಾಕ್ತಿದ್ದಾರೆ. ಈ ಅಧಿಕಾರಿಯನ್ನು ವಿಜಿ ಗುರಾಯಿಸುತ್ತಿದ್ದಾರೆ. ಈ ಲುಕ್ಗಳನ್ನು ನೋಡಿದವರು, ಇದು ನಿಜ ಘಟನೆ ಆಧಾರಿತ ಸಿನಿಮಾ ಎಂದು ಹೇಳುತ್ತಿದ್ದಾರೆ.

ಈ ಹಿಂದೆ ಸೈಲೆಂಟ್ ಸುನೀಲನ ಹೆಸರಿನಲ್ಲಿ ಅಗ್ನಿ ಶ್ರೀಧರ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡಲಾಗಿತ್ತು. ದುನಿಯಾ ಸೂರಿ ನಿರ್ದೇಶನ ಮಾಡುತ್ತಿದ್ದರು. ಈ ಚಿತ್ರದಲ್ಲಿ ಸ್ವತಃ ಸೈಲೆಂಟ್ ಸುನೀಲ ನಟಿಸುತ್ತಿದ್ದರು. ಆಮೇಲೆ ಏನಾಯ್ತೋ ಗೊತ್ತಿಲ್ಲ. ಸಿನಿಮಾ ನಿಂತು ಹೋಯಿತು. ಇದೀಗ, ಸಲಗ ಸಿನಿಮಾದ ಕೆಲವು ಚಿತ್ರಗಳು ಸೈಲೆಂಟ್ ಸುನೀಲ್ನ ರಿಯಲ್ ಸ್ಟೋರಿ ನೆನಪಿಸುತ್ತಿವೆ.

