ಸಾಧುಕೋಕಿಲ ಪುತ್ರ ಸುರಾಗ್ ಕೋಕಿಲ ಇದೀಗ ಅಪ್ಪನ ಹಾದಿಯಲ್ಲಿ ಸಾಗುತ್ತಿದ್ದು, ತಂದೆಯ ಕನಸಿನ ಕೂಸಾದ 'ಲೂಪ್' ಸ್ಟುಡಿಯೋ ಜವಾಬ್ದಾರಿ ಹೊತ್ತಿದ್ದಾರೆ. ಆ ದಿನಗಳು ಚೇತನ್ ಅಭಿನಯದ ಮಹೇಶ್ ಬಾಬು ನಿರ್ದೇಶನದ 'ಅತಿರಥ' ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುರಾಗ್ ಅಪಾರ ಕನಸುಗಳ ಹೊತ್ತು ಈ ಸ್ಟುಡಿಯೋದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಹೊಸಬರಾದರೆ ಅವರಿಗೆ ಇಂಡಸ್ಟ್ರಿಗೆ ಬರಲು ಸಾಕಷ್ಟು ಕಷ್ಟಗಳಿರುತ್ತವೆ. ಆದರೆ ನಮ್ಮ ತಂದೆ ಒಬ್ಬ ಉತ್ತಮ ಸಂಗೀತ ನಿರ್ದೇಶಕ, ಉತ್ತಮ ನಟ ಹಾಗು ಚಿತ್ರ ನಿರ್ದೇಶಕರೂ ಆದ ಕಾರಣ ನಾವು ಇಂಡಸ್ಟ್ರಿಗೆ ಬರಲು ಸುಲಭವಾಯಿತು. ಇದರಿಂದ ನಮಗೆ ಜವಾಬ್ದಾರಿ ಕೂಡಾ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಸುರಾಗ್. ಇನ್ನು ಈ ವಿಷಯದಲ್ಲಿ ನನಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸ್ಫೂರ್ತಿ. ಡಾ. ರಾಜ್ ಹಾಗೂ ತೂಗುದೀಪ್ ಶ್ರೀನಿವಾಸ್ ಇಬ್ಬರೂ ಖ್ಯಾತ ನಟರಾಗಿದ್ದರೂ ಕೂಡಾ ಅದೆಲ್ಲವನ್ನೂ ಪುನೀತ್ ಹಾಗೂ ದರ್ಶನ್ ತಲೆಯಲ್ಲಿ ಇಟ್ಟುಕೊಳ್ಳದೆ ಸಾಕಷ್ಟು ಸಾಧಿಸಿದ್ದಾರೆ. ಅವರ ರೀತಿಯಲ್ಲಿ ನಡೆಯಬೇಕೆಂಬುದು ನನ್ನ ಕನಸು. ಅಲ್ಲದೆ ನಾನು ಈಗಾಗಲೇ ಉಪೇಂದ್ರ ಅವರ ಜೊತೆ ಉಪ್ಪಿ-2 ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಕೂಡಾ ಮಾಡಿದ್ದು, ಮುಂದಿನ ದಿನಗಳಲ್ಲಿ ನಿರ್ದೇಶನ ಮಾಡಲು ಕೂಡಾ ಪ್ಲಾನ್ ಮಾಡಿರುವುದಾಗಿ ಹೇಳಿದರು.
ಮನೆಯಲ್ಲಿ ಸಂಗೀತ ದಿಗ್ಗಜರು ಇದ್ದ ಕಾರಣ ಅವರನ್ನು ನೋಡುತ್ತಲೇ ಸಂಗೀತದ ಮೇಲೆ ಆಸಕ್ತಿ ಬೆಳೆಸಿಕೊಂಡಿರುವ ಸುರಾಗ್ಗೆ ವಯೋಲಿನ್ ಅಂದ್ರೆ ತುಂಬಾ ಇಷ್ಟವಂತೆ. ಅಲ್ಲದೆ ಅದನ್ನು ನುಡಿಸುವುದು ತುಂಬಾ ಕಷ್ಟ ಎಂದು ಹೇಳುವ ಸುರಾಗ್, ಮುಂದಿನ ದಿನಗಳಲ್ಲಿ ಒಂದು ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿ ಕನ್ನಡದ ಹೊಸ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸುವ ಆಕಾಂಕ್ಷೆ ಹೊಂದಿದ್ದಾರೆ. ಆದರೆ ನಟನೆ ವಿಚಾರಕ್ಕೆ ಬಂದರೆ ಸದ್ಯಕ್ಕಂತೂ ಯಾವುದೇ ಪ್ಲಾನ್ ಇಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೋ ಗೊತ್ತಿಲ್ಲ ಎಂದು ಹೇಳಿದ ಸುರಾಗ್, ಸಂಗೀತ ಕ್ಷೇತ್ರದಲ್ಲಿ ಸಾಧಿಸುವ ಛಲದೊಂದಿಗೆ ಕನಸಿನ ಮೂಟೆ ಹೊತ್ತು ಚಂದನವನಕ್ಕೆ ಧುಮುಕಿದ್ದಾರೆ. ಅವರು ತಮ್ಮ ತಂದೆಯಂತೆ ದೊಡ್ಡ ಸ್ಥಾನಕ್ಕೆ ಬೆಳೆಯಲಿ ಎಂದು ಹಾರೈಸೋಣ.