ಡಾ.ರಾಜ್ಕುಮಾರ್ ಅಂದಾಕ್ಷಣ ಅವರ ಸರಳ ವ್ಯಕ್ತಿತ್ವ ಹಾಗೂ ಅವರು ಅಭಿನಯಿಸಿರುವ ಸಿನಿಮಾಗಳು ನೆನಪಾಗುತ್ತದೆ. ನಟನಾಗಿ, ಗಾಯಕನಾಗಿ, ಕನ್ನಡ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ಅಣ್ಣಾವ್ರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಇದೇ ಹಾದಿಯಲ್ಲಿ ಸಾಗುತ್ತಿದ್ದವರು ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್. ಅಪ್ಪು ಬಗ್ಗೆ ಗೊತ್ತಿರದ ಅನೇಕ ಸಂಗತಿಗಳನ್ನು ಪಾರ್ವತಮ್ಮ ರಾಜ್ಕುಮಾರ್ ಅವರ ಮೂರನೇ ಸಹೋದರ ಎಸ್.ಎ ಶ್ರೀನಿವಾಸ್ ಬಿಚ್ಚಿಟ್ಟಿದ್ದಾರೆ.
ಶ್ರೀನಿವಾಸ್ ಅವರು ಪ್ರೊಡಕ್ಷನ್ ಕೆಲಸಗಳನ್ನು ಮಾಡುವ ಮೂಲಕ ನಿರ್ಮಾಪಕರಾದ್ರು. ತಾಯಿಗೆ ತಕ್ಕ ಮಗ, ಶ್ರೀನಿವಾಸ ಕಲ್ಯಾಣ, ವಸಂತ ಗೀತ, ಎರಡು ಕನಸು, ಹೊಸ ಬೆಳಕು ಹೀಗೆ ಸಾಕಷ್ಟು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ನಾನು ಮದ್ರಾಸ್ನಲ್ಲಿದ್ದಾಗ ಅಪ್ಪು ಹುಟ್ಟಿದ್ದು. ಆಗ ಅವನನ್ನು ಎತ್ತಿ ಆಡಿಸಿದ್ದೇ ಎಂದು ನೆನೆಪಿಸಿಕೊಂಡಿದ್ದಾರೆ.
ಮದ್ರಾಸ್ನಿಂದ ರಾಜ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಯಿತು. ಆ ಸಮಯದಲ್ಲಿ ಚಿಕ್ಕವನಾಗಿದ್ದ ಅಪ್ಪುನನ್ನು ಸೈಕಲ್ನಲ್ಲಿ ಸ್ಕೂಲ್ಗೆ ಕರೆದುಕೊಂಡು ಹೋಗ್ತಾ ಇದ್ದೆ. ಬಾಲ್ಯದಲ್ಲೇ ಸಖತ್ ಆಕ್ಟೀವ್ ಆಗಿದ್ದ ಅಪ್ಪು ಸದಾ ನಗು ಮುಖದ ರಾಜಕುಮಾರ ಅಂದಿದ್ದಾರೆ.
ಅಪ್ಪು ಚಿಕ್ಕವಯಸ್ಸಿನಲ್ಲೇ ಹೈಪರ್ ಆಕ್ಟೀವ್ ಅನ್ನೋದಿಕ್ಕೆ ಎಸ್.ಎ ಶ್ರೀನಿವಾಸ್ ಒಂದು ಘಟನೆಯನ್ನ ಹೇಳಿದ್ದಾರೆ. ಹೈದರಾಬಾದ್ನ ವಾಹಿನಿ ಸ್ಟುಡಿಯೋದಲ್ಲಿ ಒಂದು ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿತ್ತು. ಪಕ್ಕದಲ್ಲೇ ಬಾಲಿವುಡ್ ನಟ ಸಂಜೀವ್ ಕುಮಾರ್ ಸಿನಿಮಾ ಕೂಡ ಚಿತ್ರೀಕರಣ ನಡೆಯುತ್ತಿತ್ತು. ಬ್ರೇಕ್ ವೇಳೆ ನಟ ಸಂಜೀವ್ ಕುಮಾರ್ ಬಂದು ರಾಜ್ ಕುಮಾರ್ ಹತ್ತಿರ ಮಾತನಾಡುತ್ತಿದ್ದರು.
ಆ ಸಮಯದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಮಗ ಪುನೀತ್ನನ್ನು ಕರೆದುಕೊಂಡು ಬಂದ್ರಂತೆ. ಆಗ ಅಣ್ಣಾವ್ರು ಸಂಜೀವ್ ಕುಮಾರ್ಗೆ ಇವನು ನನ್ನ ಚಿಕ್ಕ ಮಗ ಅಂತಾ ಅಂದ್ರಂತೆ. ಆಗ ಸಂಜೀವ್ ಕುಮಾರ್, ನಾನು ಬಾಲಿವುಡ್ನಲ್ಲಿ ಬಡಾ ಆರ್ಟಿಸ್ಟ್ ಅಂತಾ ಹೇಳಿಕೊಂಡ್ರಂತೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಅಪ್ಪು, 'ರೀ ನೀವು ನನಗೆ ಬೇಡ, ನನಗೆ ಅಮಿತಾಬ್ ಬಚ್ಚನ್ ಇಷ್ಟ ರೀ' ಅಂದ್ರಂತೆ.
ಅದಕ್ಕೆ ತಕ್ಷಣವೇ ಮೇಲೆದ್ದು ನಿಂತ ನಟ ಸಂಜೀವ್ಕುಮಾರ್, ರಾಜ್ಕುಮಾರ್ ಅವರೇ ನಾನು ಎಂತಹ ಆಕ್ಟಿಂಗ್ ಮಾಡಿದ್ರೆ ಏನು ಪ್ರಯೋಜನಾ.. ಇವತ್ತು ಅಮಿತಾಬ್ ಬಚ್ಚಾನ್ ಆ ಲೆವೆಲ್ನಲ್ಲಿ ಇದ್ದಾರೆ ಅಂದ್ರೆ, ಅದಕ್ಕೆ ಇಂತಹ ಮಕ್ಕಳು ಕಾರಣ. ಈ ಹುಡುಗನಿಗೆ ಅಮಿತಾಬ್ ಗೊತ್ತು. ನಾನು ಗೊತ್ತಿಲ್ಲ ಅಂದ್ರಂತೆ.
ರಾಜ್ಕುಮಾರ್ ಮತ್ತು ಪುನೀತ್ ನಮ್ಮ ಸ್ವತ್ತು ಅಲ್ಲ. ಕರ್ನಾಟಕದ ಸ್ವತ್ತು. ಅಪ್ಪು ಮೈಸೂರಿಗೆ ಬಂದಾಗ ನನ್ನನ್ನ ಭೇಟಿ ಮಾಡಿ ಬರ್ತಾ ಇದ್ದ. ಅಂದು ನಮ್ಮ ಮನೆಯಲ್ಲಿ ಒಂದು ಪವರ್ ಇತ್ತು ಅಂತಾ ಎದೆ ತೊಟ್ಟಿಕೊಂಡು ಹೇಳ್ತಾ ಇದ್ದೆವು. ಆದ್ರೆ, ಇವತ್ತು ಆ ಪವರ್ ಅನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ.
ಎಸ್. ಎ ಶ್ರೀನಿವಾಸ್ ಅವರನ್ನ ಪುನೀತ್ ರಾಜ್ಕುಮಾರ್ 'ಸೀನು ಮಾಮ' ಅಂತಾ ಕರೆಯುತ್ತಿದ್ರಂತೆ. ಸಿನಿಮಾ ನಿರ್ಮಾಪರಿಗೆ ಅಪ್ಪು ಅಂದ್ರೆ ರಿಸರ್ವ್ ಬ್ಯಾಂಕ್ ನಲ್ಲಿ ದುಡ್ಡು ಇಟ್ಟ ಹಾಗೆ. ಹತ್ತು ದಿನದ ಹಿಂದೆ ನಮ್ಮ ಸಂಬಂಧಿಕರ ಮದುವೆಯಲ್ಲಿ ಅಪ್ಪು ಜೊತೆ ಮಾತನಾಡಿದೆ. ಯುವರತ್ನ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಗೆ ಫೋಟೋ ತೆಗೆಸಿಕೊಳ್ಳೋದಿಕ್ಕೆ ಹೇಳಿದ್ದೆ. ಆದರೆ, ಒಂದು ಸ್ವಲ್ಪನೂ ಬೇಜಾರು ಮಾಡಿಕೊಳ್ಳದೇ ಅಪ್ಪು ನಾನು ಹೇಳಿದ ಕೆಲಸ ಮಾಡ್ತಾ ಇದ್ದ ಎಂದರು.
ಮೈಸೂರಿನ ಹುಡ್ ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಭಜರಂಗಿ 2 ಸಿನಿಮಾ ನೋಡ್ತಾ ಇದ್ದೆ. ಇನ್ನೇನು ಕ್ಲೈಮಾಕ್ಸ್ ಹಂತದಲ್ಲಿ ಚಿತ್ರಮಂದಿರದ ಮಾಲೀಕರು ಕರೆದು ಅಪ್ಪು ತೀರಿಕೊಂಡ್ರಂತೆ ಅಂತಾ ಸುದ್ದಿ ಹೇಳಿದ್ರು. ಅದನ್ನು ಕೇಳಿ ಒಮ್ಮೆಲೆ ಮೂರ್ಛೆ ಹೋದೆ ಅಂತಾರೆ ಶ್ರೀನಿವಾಸ್.
ಪುನೀತ್ ರಾಜ್ಕುಮಾರ್ ಅಂದಾಕ್ಷಣ ಎಲ್ಲಿಗೋ ಹೋಗಿ ಬಿಡುತ್ತೇವೆ. ಅವರ ತಂದೆ ಆವಾಗ್ಲೇ ಅಭಿಮಾನಿಗಳನ್ನ ದೇವರು ಅಂತಾ ಕರೆದರು. ಆ ಮಾತನ್ನು ಪುನೀತ್ ಕಾಪಾಡಿಕೊಂಡು ಬಂದ ಅಂತಾ ಅವರು ಭಾವುಕರಾದರು.
ಓದಿ: 22ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಬದುಕಿಗೆ ವಿದಾಯ ಹೇಳಿದ 'ರಾಜಕುಮಾರ'..